ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂಬ ಕಿಚ್ಚು ಜೋರಾಗ್ತಾ ಇದೆ. ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯ ಹೋರಾಟಗಾರರು ಧರಣಿ ಸ್ಥಳದಲ್ಲಿ ತಲೆ ಮೇಲೆ ಕಲ್ಲು ಹೊತ್ತು ವಿನೂತನ ಪ್ರತಿಭಟನೆ ಆರಂಭಿಸಿದ್ದಾರೆ.
ಹೌದು !ಕಳೆದ ಅಧಿವೇಶನದಲ್ಲಿ ವಿಜಯಪುರ ಜಿಲ್ಲೆಗೆ ಖಾಸಗಿ ಸಹಭಾಗಿತ್ವದಲ್ಲಿ (ಪಬ್ಲಿಕ್, ಪ್ರೈವೆಟ್, ಪಾರ್ಟನರ್ ಶಿಪ್ PPP) ಮೆಡಿಕಲ್ ಕಾಲೇಜು ಸ್ಥಾಪನೆ ಮಾಡೋದಾಗಿ ಸರ್ಕಾರ ಘೋಷಣೆ ಮಾಡಿದ್ದೆ ತಡ. ವಿಜಯಪುರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕೆಂದು ಪಿಪಿಪಿ ಮೆಡಿಕಲ್ ಕಾಲೇಜ್ ಬೇಡ ಎಂದು ಸೆಪ್ಟೆಂಬರ್ 18 ರಿಂದ ಹೋರಾಟ ಆರಂಭವಾಯಿತು.ಕಳೆದ 77 ದಿನಗಳಿಂದ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯಿಂದ ಧರಣಿ ನಡೆಸುತ್ತಿದೆ.
ಕಳೆದ 77 ದಿನಗಳಿಂದ ವಿವಿಧ ಹಂತದ ಹೋರಾಟ ನಡೆದಿದೆ. ಬೀದಿಗಿಳಿದು ಹೋರಾಟ, ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವುದರ ಮೂಲಕ ಹೋರಾಟ, ಪ್ರತಿ ತಾಲೂಕುಗಳಲ್ಲಿ ಹೋರಾಟ, ಕರಾಳ ದೀಪಾವಳಿ ಆಚರಣೆ, ರಕ್ತದ ಮೂಲಕ ಸಹಿ ಸಂಗ್ರಹ, ಪತ್ರ ಚಳುವಳಿ, ಕಪ್ಪುಬಟ್ಟೆ ಚಳುವಳಿ, ರಂಗೋಲಿ ಚಳುವಳಿ, ಹೀಗೆ ವಿವಿಧ ಆಯಾಮಗಳಲ್ಲಿ ಹೋರಾಟ ಮಾಡಿದರು ಸರ್ಕಾರ ಎಚ್ಚೆತ್ತುಕೊಂಡಿಲ್ಲ.ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಿಸುವರೆಗೂ ಹೋರಾಟ ನಿಲ್ಲೋದಿಲ್ಲ ಎಂದು ಆಗ್ರಹಿಸಿ ತಲೆ ಮೇಲೆ ಕಲ್ಲು ಹೊತ್ತು ವಿನೂತನ ರೀತಿಯಲ್ಲಿ ಹೋರಾಟ ನಡೆಸಿ ರಾಜ್ಯ ಸರ್ಕಾರ ಹಾಗೂ ಜಿಲ್ಲೆಯ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಪಿಪಿಪಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋಧಿಸಿ ನಡೆಸುತ್ತಿರುವ ಹೋರಾಟ 77 ನೇ ದಿನಕ್ಕೆ ಕಾಲಿಟ್ಟಿದೆ, ಈ ಹೋರಾಟ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿ ಸರ್ಕಾರ ಈ ಸಮಸ್ಯೆಗೆ ಹೇಗೆ ಸ್ಪಂದಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
Kshetra Samachara
03/12/2025 09:32 pm