ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಜನಜಾತ್ರೆಯಾದ ಶ್ರೀಗಳ ಅಂತ್ಯಕ್ರಿಯೆ!

ವಿಜಯಪುರ: ಸುತ್ತಮುತ್ತಲ ಹಳ್ಳಿಗಳಿಂದ ಹರಿದು ಬಂದ ಭಕ್ತರ ದಂಡು! ಎಲ್ಲರಲ್ಲೂ ಕೊನೆಯ ಬಾರಿಗೆ ಒಂದು ಸಲ ಕಣ್ತುಂಬಿಕೊಳ್ಳಬೇಕೆಂಬ ಕಾತರ!

ಮಂತ್ರಿ ಮಹೋದಯರು, ಕಾವಿಧಾರಿ ಶರಣ ಸಂತರು ಊರಿನ ಗಣ್ಯಾತಿಗಣ್ಯರನೇಕರು!

ಇಂದು ಈ ಜನಜಾತ್ರೆ ಕಂಡು ಬಂದದ್ದು, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಬಳಿ ಇರುವ ಇಂಗಳೇಶ್ವರ ಗ್ರಾಮದಲ್ಲಿ. ಅದು ನಿನ್ನೆ ವಿಧಿವಶರಾದ, ಸಾರ್ಥಕ 97 ವರ್ಷಗಳನ್ನು ಪೂರೈಸಿದ ಷಟಸ್ಥಲ ಬ್ರಹ್ಮಸ್ವರೂಪಿ ಶ್ರೀ ಶ್ರೀ ಚೆನ್ನಬಸವ ಮಹಾಸ್ವಾಮೀಜಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ.

ಹೌದು. ಬಸವಣ್ಣನವರ ಅಪ್ಪಟ ಅನುಯಾಯಿಯಾಗಿದ್ದ ಶ್ರೀಗಳು ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆಂಬಂತೆ ಬಸವಣ್ಣನವರ ಸಹಸ್ರ ವಚನಗಳನ್ನು ಕಲ್ಲಿನಲ್ಲಿ ಕೆತ್ತಿಸುವ ಮೂಲಕ "ವಚನ ಶಿಲಾಮಂಟಪ"ದ ರೂವಾರಿ ಎನ್ನಿಸಿದ್ದರು. ಈ ಮೂಲಕ ಇಂಗಳೇಶ್ವರದ ವಿರಕ್ತ ಮಠದತ್ತ ಎಲ್ಲರ ಚಿತ್ತ ಹರಿಯುವಂತೆ ಮಾಡಿದ್ದರು. ಜೊತೆಗೆ ತಮ್ಮ ಸರಳ, ಸುಂದರ ಪ್ರವಚನಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದ ಸ್ವಾಮೀಜಿಯವರು, ಈ ಭಾಗದ ಅಸಂಖ್ಯಾತ ಭಕ್ತರು- ಅನುಯಾಯಿಗಳನ್ನು ಹೊಂದಿದ್ದರು.

ಸ್ವಾಮೀಜಿಯವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಮತ್ತು ಕೇಂದ್ರ ಸಚಿವರೂ ಆದ ಹೆಚ್.ಡಿ.ಕುಮಾರಸ್ವಾಮಿ ಅವರು ಸೇರಿದಂತೆ ನಾನಾ ಮಠ-ಮಾನ್ಯಗಳ ಸ್ವಾಮೀಜಿಯವರು ಶೋಕ ವ್ಯಕ್ತಪಡಿಸಿದ್ದು, ಅಗಲಿದ ಶ್ರೀಗಳ ಸೇವಾಮನೋಭಾವವನ್ನು ಮೆಲುಕು ಹಾಕುತ್ತಿದ್ದುದು ಸಾಮಾನ್ಯವೆಂಬಂತಾಗಿತ್ತು.

ಸ್ವಾಮೀಜಿಯವರ ಅಂತ್ಯಕ್ರಿಯೆ ಕಾರ್ಯಕ್ರಮದ ಭಾಗವಾಗಿ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಕೆಎಸ್ ಡಿಎಲ್ ಅಧ್ಯಕ್ಷರು ಮತ್ತು ಮುದ್ದೇಬಿಹಾಳ ಶಾಸಕರು ಆದ ಅಪ್ಪಾಜಿ ನಾಡಗೌಡ, ದೇವರ ಹಿಪ್ಪರಗಿ ಶಾಸಕ ರಾಜೂಗೌಡ ಪಾಟೀಲ್, ಹುಮನಾಬಾದ್ ಎಂಎಲ್ ಸಿ ಭೀಮರಾಯ ಪಾಟೀಲ್ ಅವರು ಸೇರಿದಂತೆ ಮೊದಲಾದ ಗಣ್ಯರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಶ್ರೀಗಳ ಆತ್ಮಕ್ಕೆ ಶಾಂತಿ ಕೋರಿದರು. ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ನಂತರ ಲಿಂಗೈಕ್ಯರಾದ ಶ್ರೀಗಳ ಪಾರ್ಥಿವ ಶರೀರವನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದುದು ಕಂಡು ಬಂತು. ತದನಂತರ ವೀರಶೈವ ವಿರಕ್ತ ಮಠದ ಸಂಪ್ರದಾಯದಂತೆ ಸ್ವಾಮೀಜಿಯವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ವಿಜಯಪುರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತದ ವಿವಿಧ ಅಧಿಕಾರಿ ವರ್ಗದವರು ಹಾಜರಿದ್ದರು. ಚೆನ್ನಬಸವ ಮಹಾಸ್ವಾಮೀಜಿಯವರನ್ನು ಕಳೆದುಕೊಂಡ ವಚನ ಶಿಲಾ ಮಂಟಪವಿನ್ನು ಬರಿದಾಯಿತೇನೋ ಎಂಬ ಭಾವ ಇಲ್ಲಿ ನೆರೆದವರನ್ನು ಕಾಡಿದಂತಿತ್ತು.

ಚೆನ್ನವೀರ ಸಗರನಾಳ್ ಪಬ್ಲಿಕ್ ನೆಕ್ಸ್ಟ್ ವಿಜಯಪುರ

Edited By : Shivu K
PublicNext

PublicNext

12/12/2025 09:23 pm

Cinque Terre

15.73 K

Cinque Terre

1