ಮಂಗಳೂರು: ನಿರ್ಭಯಾ ಪ್ರಕರಣದಲ್ಲಿನ ಆರೋಪಿಗಳು ಯಾವುದೋ ದುರ್ಬಲ ಸಮುದಾಯದವರಾಗಿದ್ದಕ್ಕೇ ಶೀಘ್ರ ನ್ಯಾಯ ದೊರಕಿತು. ಆದರೆ ಸೌಜನ್ಯಾ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಪ್ರಬಲ ಸಮುದಾಯದವರಾಗಿದ್ದ ಕಾರಣಕ್ಕೆ ಪ್ರಕರಣ 13 ವರ್ಷಗಳಾದರೂ ಕುಂಟುತ್ತಿದೆ ಎಂದು ಮಹಿಳಾ ಹೋರಾಟಗಾರ್ತಿ ಜ್ಯೋತಿ ಎ. ಹೇಳಿದರು.
ಧರ್ಮಸ್ಥಳ ಗ್ರಾಮದಲ್ಲಿ ಮಹಿಳೆಯರನ್ನು ಕೊಂದವರು ಯಾರು? ಎಂದು ಪ್ರಶ್ನಿಸಿ ಸಮಾನ ಮನಸ್ಕ ಮಹಿಳಾ ಸಂಘಟನೆಯ ವತಿಯಿಂದ ಬೆಳ್ತಂಗಡಿಯ ತಾಲೂಕು ಕಚೇರಿ ಆವರಣದಲ್ಲಿ ಕೊಂದವರು ಯಾರು? ಎಂಬ ಮಹಿಳಾ ನ್ಯಾಯ ಸಮಾವೇಶದಲ್ಲಿ ಅವರು ಮಾತನಾಡಿದರು.
ದಶಕಗಳಿಂದ ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನಡೆದ ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ, ಅಸಹಜ ಸಾವು, ನಾಪತ್ತೆ ಪ್ರಕರಣಗಳಲ್ಲಿ ಯಾಕೆ ನ್ಯಾಯ ಸಿಗುತ್ತಿಲ್ಲ. ಇಲ್ಲಿ ಕೊಂದವರು ಯಾರು?, ಅತ್ಯಾಚಾರ ಮಾಡಿದ್ದು ಯಾರು?, ನಾಪತ್ತೆಯಾದ ಹೆಣ್ಣುಮಕ್ಕಳು ಎಲ್ಲಿ ಹೋದರು? ಎಂಬುದು ಯಕ್ಷ ಪ್ರಶ್ನೆಯಾಗಿದೆ. ಜೊತೆಗೆ ಕಾನೂನಿಗೂ ಇದರ ಹಿಂದಿನ ಕಾಣದ ಕೈಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ ಎಂದು ಹೇಳಿದರು.
ವೇದವಲ್ಲಿ ಪ್ರಕರಣ ಅಂದರೆ 1979ರಿಂದ ಇಂದಿನವರೆಗೆ ಎಲ್ಲಾ ಬಣ್ಣಗಳ ಸರಕಾರಗಳು ಬಂದು ಹೋಗಿದೆ. ಆದರೆ ಇಲ್ಲಿ ಅನ್ಯಾಯಕ್ಕೊಳಗಾದ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕಿಲ್ಲ. ಯಾವ ಪ್ರಕರಣಕ್ಕೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಹಾಗಾದರೆ ಇಲ್ಲಿ ನೂರಾರು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ, ಕೊಲೆ ನಡೆದಾಗ ಪೊಲೀಸ್ ಇಲಾಖೆ ಎಲ್ಲಿ ಹೋಗಿತ್ತು. ದೂರುದಾರರು ನೀಡಿದ ದೂರನ್ನು ತೆಗೆದುಕೊಳ್ಳದ ಪೊಲೀಸ್ ಇಲಾಖೆ ಯಾಕೆ ಬೇಕು ಎಂದು ಹೇಳಿದರು.
ಹಿರಿಯ ಲೇಖಕಿ ಬಿ.ಎಂ.ರೋಹಿಣಿ ಮಾತನಾಡಿ, ಹೆಣ್ಣು ಮಕ್ಕಳು ಬಾಯಿ ಮುಚ್ಚಲಿಕ್ಕೆ ಇರುವವರು ಎಂಬುದು ಶತಮಾನಗಳ ಖಾತ್ರಿಯಾದ ಸಂಗತಿ. ಆದರೆ ಈಗ ಸಂವಿಧಾನ ಅನ್ಯಾಯವನ್ನು ಪ್ರಶ್ನಿಸುವ, ವಿರೋಧಿಸುವ ಹಕ್ಕನ್ನು ನೀಡಿದೆ. ಕರಾವಳಿಯಲ್ಲಿ ಸ್ತ್ರೀಪರಹೋರಾಟದ ದೊಡ್ಡ ಚರಿತ್ರೆಯಿದೆ. ತುಳುನಾಡಿನ ಸಿರಿಯು ಪರಸ್ತ್ರೀ ವ್ಯಾಮೋಹಿ ಪತಿಗೆ ತಾನೇ ವಿಚ್ಛೇದನ ನೀಡಿ ಮನೆಯಿಂದ ಹೊರನಡೆದ ಗಟ್ಟಿಗಿತ್ತಿ ಆಕೆ. ಅದೆಷ್ಟೋ ಮಂದಿ ಪಾಳಯಗಾರರಿದ್ದರೂ ಪೋರ್ಚುಗೀಸರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಅವರ ದಬ್ಬಾಳಿಕೆಯನ್ನು ದಮನ ಮಾಡಿದ್ದು ರಾಣಿ ಅಬ್ಬಕ್ಕ. ಆದ್ದರಿಂದ ಹೆಣ್ಣು ಮಕ್ಕಳನ್ನು ತಾತ್ಸರದಿಂದ ಕಾಣುವ ಕೆಲ ಪುರುಷರಿಗೆ ಹೆಣ್ಣು ಮಕ್ಕಳ ಪರಾಕ್ರಮದ ಇತಿಹಾಸವೇ ಗೊತ್ತಿಲ್ಲ. ಇಲ್ಲಿನ ನೆಲದ ಹೆಣ್ಣು ಮಕ್ಕಳ ಆರ್ತನಾದ ಇಡೀ ದೇಶಕ್ಕೆ ಕೇಳಬೇಕು. ನ್ಯಾಯದೇವತೆ ಕಣ್ಣಿಗೆ ಬಟ್ಟೆ ಕಟ್ಟಿದ್ದರಿಂದ ಕುರುಡಿಯಾಗಿದ್ದಾಳೆ ವಿನಃ ಮೂಕಿ, ಕಿವುಡಿಯಲ್ಲ. ನ್ಯಾಯ ನಮಗೆ ಸಿಗಲೇಬೇಕು, ಸಿಕ್ಕೇ ಸಿಗ್ತದೆ. ಅದಕ್ಕಾಗಿ ನಾವು ಇಲ್ಲಿ ಸೇರಿದ್ದೇವೆ ಎಂದರು.
ಸಮಾವೇಶಕ್ಕೂ ಮುನ್ನ ಬೆಳ್ತಂಗಡಿಯ ಮಾರಿಗುಡಿಯಿಂದ ತಾಲೂಕು ಕಚೇರಿಯವರೆಗೆ ಮಹಿಳೆಯರ ಮೌನ ಮೆರವಣಿಗೆ ನಡೆಯಿತು. ದೆಹಲಿಯ ನಿರ್ಭಯ ಹತ್ಯೆ ನಡೆದ ದಿನವಾಗಿದ್ದು, ನಿರ್ಭಯಾ ಪ್ರಕರಣದ ನೆನಪಿನಲ್ಲಿ ಅತ್ಯಾಚಾರ ವಿರೋಧಿ ಆಶಯದಲ್ಲಿ ಮಹಿಳಾ ಸಮಾವೇಶ ನಡೆಯಿತು. ಸಮಾವೇಶದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ನೂರಾರು ಮಹಿಳೆಯರು ಭಾಗವಹಿಸಿದ್ದರು. ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ನಡೆದ ಅಸಹಜ ಸಾವು ಪ್ರಕರಣ ತನಿಖೆ ನಡೆಸಿ ಕೊಂದವರು ಯಾರು ಅನ್ನೋದನ್ನು ಬೆಳಕಿಗೆ ತರಬೇಕೆಂದು ಒತ್ತಾಯಿಸಲಾಯಿತು. ಬಳಿಕ 11 ಹಕ್ಕೊತ್ತಾಯಗಳನ್ನು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂರವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
PublicNext
17/12/2025 04:52 pm