ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗದಲ್ಲಿ ಹೆಚ್ಚಿದ ಅಪರಾಧ, ಪೊಲೀಸರ ಅಸಹಾಯಕತೆ: ಕಮಿಷನರೇಟ್‌ಗೆ ತೀವ್ರ ಒತ್ತಾಯ!

ಶಿವಮೊಗ್ಗ: ಶಿವಮೊಗ್ಗ ನಗರಕ್ಕೆ ಪೊಲೀಸ್ ಕಮಿಷನರೇಟ್ ಕಚೇರಿಯನ್ನು ಮಂಜೂರು ಮಾಡಬೇಕೆಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶಿವಮೊಗ್ಗ ಜಿಲ್ಲೆಯ ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ಸಿಬ್ಬಂದಿ ಕೊರತೆಯ ಬಗ್ಗೆ ವಿಷಯ ಪ್ರಸ್ತಾಪಿಸಿದ ಅವರು, ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದರು.

ಹೆಚ್ಚುತ್ತಿರುವ ಅಪರಾಧ ಮತ್ತು ಸಿಬ್ಬಂದಿ ಕೊರತೆ

ಶಾಸಕ ಚನ್ನಬಸಪ್ಪ ಅವರು ಮಾತನಾಡಿ, ಶಿವಮೊಗ್ಗ ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ನಗರದ ಹೊರವಲಯಗಳಲ್ಲಿ ಅಪರಾಧ ಚಟುವಟಿಕೆಗಳು ಗಣನೀಯವಾಗಿ ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯ ತೀವ್ರ ಕೊರತೆಯಿರುವುದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಸಾಮಾನ್ಯವಾಗಿ ಇನ್ಸ್‌ಪೆಕ್ಟರ್ ದರ್ಜೆಯ ಪೊಲೀಸ್ ಠಾಣೆಗಳಲ್ಲಿ 70 ಸಿಬ್ಬಂದಿ ಇರಬೇಕಾದ ಜಾಗದಲ್ಲಿ, ಕೇವಲ 35 ರಿಂದ 45 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿವರಿಸಿದರು.

ಸಾರ್ವಜನಿಕರಲ್ಲಿ ಆತಂಕ ಮತ್ತು ಅಸಹಾಯಕ ಸಿಬ್ಬಂದಿ

ಕಳ್ಳತನದ ಪ್ರಕರಣಗಳು ಹೆಚ್ಚುತ್ತಿರುವುದನ್ನು ನೋಡಿದರೆ, ಶಿವಮೊಗ್ಗದಲ್ಲಿ ಜನ ಸಾಮಾನ್ಯರು ಭಯಪಡುವ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಇತ್ತೀಚೆಗೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಸಂದರ್ಭವನ್ನು ನೆನಪಿಸಿದ ಶಾಸಕರು, ಅಲ್ಲಿನ ಇನ್ಸ್‌ಪೆಕ್ಟರ್ ಅವರೇ ಸಿಬ್ಬಂದಿ ಕೊರತೆಯಿಂದಾಗಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಮಾತ್ರವಲ್ಲದೆ, ಪಕ್ಕದ ಭದ್ರಾವತಿ ನಗರದ ಪರಿಸ್ಥಿತಿಯೂ "ದೇವರೇ ಕಾಪಾಡಬೇಕು" ಎನ್ನುವ ಹಂತಕ್ಕೆ ತಲುಪಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕಮಿಷನರೇಟ್ ಅನಿವಾರ್ಯ: ತುರ್ತು ಕ್ರಮಕ್ಕೆ ಆಗ್ರಹ

ಈ ಹಿಂದೆ ಹಲವು ಬಾರಿ ಮನವಿ ಮಾಡಿದರೂ ಸಹ ಈ ಸಮಸ್ಯೆ ಬಗೆಹರಿದಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಈ ಎಲ್ಲ ಕಾರಣಗಳಿಂದಾಗಿ, ಶಿವಮೊಗ್ಗಕ್ಕೆ ಪೊಲೀಸ್ ಕಮಿಷನರೇಟ್ ಕಚೇರಿ ಅನಿವಾರ್ಯವಾಗಿದ್ದು, ಗೃಹ ಸಚಿವರು ಈ ಬಗ್ಗೆ ತಕ್ಷಣವೇ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಸರ್ಕಾರವನ್ನು ಆಗ್ರಹಿಸಿದರು.

Edited By : Suman K
PublicNext

PublicNext

17/12/2025 05:16 pm

Cinque Terre

9.26 K

Cinque Terre

0

ಸಂಬಂಧಿತ ಸುದ್ದಿ