ಸೊರಬ: ತಾಲೂಕಿನ ಜೇಡಿಗೆರೆ ಸಮೀಪದ ತೋಟದ ಮನೆಯಲ್ಲಿ ನಡೆದ ದಾರುಣ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧದ ಅನುಮಾನದ ಹಿನ್ನೆಲೆಯಲ್ಲಿ ಅಣ್ಣನೊಬ್ಬ ತನ್ನ ಸ್ವಂತ ತಮ್ಮನನ್ನೇ ಕೊಲೆ ಮಾಡಿ, ಶವವನ್ನು ಗುಂಡಿ ತೆಗೆದು ಹೂತು ಹಾಕಿರುವ ಅಮಾನವೀಯ ಕೃತ್ಯ ಇದಾಗಿದೆ.
ಮೃತನನ್ನು 28 ವರ್ಷದ ರಾಮಚಂದ್ರ ಎಂದು ಗುರುತಿಸಲಾಗಿದ್ದು, ಹತ್ಯೆ ನಡೆಸಿದ ಆರೋಪಿ ಆತನ ಅಣ್ಣ, 35 ವರ್ಷದ ಮಾಲತೇಶ್ ಎಂದು ಪೊಲೀಸರು ತಿಳಿಸಿದ್ದಾರೆ. ಎಂಟು ವರ್ಷಗಳ ಹಿಂದೆ ಭಾಗ್ಯ ಎಂಬುವವರನ್ನು ಮದುವೆಯಾಗಿದ್ದ ಮಾಲತೇಶ್, ಹಿರೇಕೆರೂರು ತಾಲೂಕಿನ ಚಟಕೆರೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ರಾಮಚಂದ್ರ ಕೂಡ ಇವರೊಂದಿಗೇ ವಾಸವಾಗಿದ್ದ. ಕಳೆದ ನಾಲ್ಕು ವರ್ಷಗಳಿಂದ ಈ ಕುಟುಂಬ ಸೊರಬ ತಾಲೂಕಿನ ಜೇಡಿಗೆರೆ ಬಳಿಯ ತೋಟದ ಮನೆಯಲ್ಲಿ ಕೆಲಸ ಮಾಡಿಕೊಂಡಿತ್ತು.
ರಾಮಚಂದ್ರ ಆಗಾಗ ಕೂಲಿ ಕೆಲಸಕ್ಕೆಂದು ಹೊರ ಹೋದರೆ ಹಲವು ದಿನಗಳ ಕಾಲ, ಕೆಲವೊಮ್ಮೆ ತಿಂಗಳಾದರೂ ಮನೆಗೆ ಮರಳುತ್ತಿರಲಿಲ್ಲ. ಆದರೆ, ಕಳೆದ ಸೆಪ್ಟೆಂಬರ್ 8ರಂದು ಮನೆಯಿಂದ ಹೊರಟ ರಾಮಚಂದ್ರ ಸುಮಾರು ಒಂದೂವರೆ ತಿಂಗಳಾದರೂ ಹಿಂತಿರುಗಿ ಬರದಿದ್ದಾಗ, ಆತನ ತಾಯಿ ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ನಂತರದ ದಿನಗಳಲ್ಲಿ ಮನೆಗೆ ಬಂದ ಮಾಲತೇಶ್ ಮತ್ತು ಆತನ ಪತ್ನಿ ಭಾಗ್ಯರಿಂದ ಸತ್ಯ ಬಯಲಿಗೆ ಬಂದಿದೆ. ರಾಮಚಂದ್ರ ಮತ್ತು ಭಾಗ್ಯ ನಡುವೆ ಅಕ್ರಮ ಸಂಬಂಧವಿತ್ತು ಎಂಬ ಅನುಮಾನದಿಂದ ಮಾಲತೇಶ್ ದ್ವೇಷ ಸಾಧಿಸಿದ್ದನು. ಸೆಪ್ಟೆಂಬರ್ 8ರಂದು ರಾಮಚಂದ್ರನನ್ನು ಮದುವೆ ವಿಚಾರ ಹಾಗೂ ದೋಷ ಪರಿಹಾರದ ನೆಪದಲ್ಲಿ ತೋಟದ ಮನೆಗೆ ಕರೆಸಿಕೊಂಡ ಮಾಲತೇಶ್, ಆತನಿಗೆ ಸಾರಾಯಿ ಕುಡಿಸಿ, ನಂತರ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಕೊಲೆ ಮಾಡಿದ ನಂತರ ಶವವನ್ನು ತೋಟದ ಪಕ್ಕದಲ್ಲೇ ಗುಂಡಿ ತೆಗೆದು ಹೂತು ಹಾಕಿದ್ದನು.
ಹತ್ಯೆ ನಡೆಸಿದ ಬಳಿಕ ತೋಟದ ಮನೆಯನ್ನು ಬಿಟ್ಟು ಹೋಗಿದ್ದ ಆರೋಪಿ ಮಾಲತೇಶ್, ಅಕ್ಟೋಬರ್ 29ರಂದು ರಾಮಚಂದ್ರ ಕಾಣೆಯಾಗಿದ್ದಾನೆ ಎಂದು ಆನವಟ್ಟಿ ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿದ್ದ. ಆದರೆ, ಆನವಟ್ಟಿ ಹಾಗೂ ಸೊರಬ ಪೊಲೀಸರು ಜಂಟಿಯಾಗಿ ನಡೆಸಿದ ತನಿಖೆಯಲ್ಲಿ ಇದು ಕೇವಲ ನಾಪತ್ತೆ ಪ್ರಕರಣವಲ್ಲ, ಬದಲಾಗಿ ಕೊಲೆ ಪ್ರಕರಣ ಎಂಬುದು ಖಚಿತವಾಯಿತು.
ಸಿಪಿಐ ಮಹಾಂತೇಶ್ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ ಆರೋಪಿ ಮಾಲತೇಶ್, ತನ್ನ ಸ್ವಂತ ತಮ್ಮನನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸಾಗರ ಉಪವಿಭಾಗಾಧಿಕಾರಿ ವೀರೇಶ್ ಕುಮಾರ್ ಸಮ್ಮುಖದಲ್ಲಿ ಹತ್ಯೆ ನಡೆದ ಸ್ಥಳದಲ್ಲಿ ಮಹಜರು ನಡೆಸಿ, ಹೂತು ಹಾಕಿದ್ದ ಶವವನ್ನು ಹೊರತೆಗೆದು ಮೃತನ ಪಾಲಕರಿಗೆ ಹಸ್ತಾಂತರಿಸಿದ್ದಾರೆ.
ದೂರು ದಾಖಲಾದ ಕೂಡಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸೊರಬ ಪೊಲೀಸರು, ತಡಮಾಡದೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ಮುಂದಿನ ತನಿಖೆ ಮುಂದುವರೆದಿದೆ.
ಈ ಪ್ರಕರಣದ ತನಿಖಾ ತಂಡದಲ್ಲಿ ಡಿವೈಎಸ್‌ಪಿ ಕೇಶವ್, ಸಿಪಿಐ ಮಹಾಂತೇಶ್ ಲಂಬಿ, ಸೊರಬ ಪಿಎಸ್ಐ ನವೀನ್ ಕುಮಾರ್, ಸೇರಿದಂತೆ ಸಿಬ್ಬಂದಿಗಳು ಹಾಗೂ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.
ವರದಿ: ಮಧು ರಾಮ್, ಪಬ್ಲಿಕ್ ನೆಕ್ಸ್ಟ್, ಸೊರಬ
PublicNext
17/12/2025 10:10 pm