ಶಿವಮೊಗ್ಗ: ನಗರದ ಹೊರವಲಯದ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ಮೂಲ ಸೌಕರ್ಯಗಳಿಲ್ಲದೆ, ಅದೊಂದು ರಿಯಲ್ ಎಸ್ಟೇಟ್ ಏಜೆಂಟ್‌ಗಳ ಅಡ್ಡೆಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಆರೋಪಿಸಿದ್ದಾರೆ.
ಬೆಳಗಾವಿಯ ವಿಧಾನ ಪರಿಷತ್ ಅಧಿವೇಶನದಲ್ಲಿ ಮಾತನಾಡಿದ ಅವರು, ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ವಿಳಂಬ ಹಾಗೂ ಪರಿಸರ ಅನುಮತಿ ಇಲ್ಲದ ಸಮಸ್ಯೆ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕೆಂದು ಆಗ್ರಹಿಸಿದರು. ಕೆಐಎಡಿಬಿ 2016-17ರಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನ ಮಾಡಿಕೊಂಡಿದೆ. ಮೂಲಸೌಕರ್ಯ ಒದಗಿಸದೇ ಮತ್ತು ಪರಿಸರ ಅನುಮತಿ ಪಡೆಯದೇ ಕೈಗಾರಿಕೋದ್ಯಮಿಗಳನ್ನು ವರ್ಷಗಳ ಕಾಲ ಕಾಯುವಂತೆ ಮಾಡಿರುವುದು ದುರಂತಕರವಾಗಿದೆ ಎಂದು ಸದನದ ಗಮನಕ್ಕೆ ತಂದರು.
ಒಟ್ಟು 250 ಎಕರೆ ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿ 180 ಕೈಗಾರಿಕೋದ್ಯಮಿಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ, ಕಾರ್ಯಾರಂಭ ಮಾಡಿದ 20 ಘಟಕಗಳಿಗೂ ಪರಿಸರ ಅನುಮತಿ ದೊರೆತಿಲ್ಲ, ಇದರಿಂದ ಕಳೆದ 10 ವರ್ಷಗಳಿಂದ ಕೈಗಾರಿಕೋದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ವಿವರಿಸಿದರು.ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪರಿಸರ ಅನುಮತಿ ಶೀಘ್ರ ನೀಡುವುದು ಸರ್ಕಾರದ ಹೊಣೆಗಾರಿಕೆ ಎಂದು ಉಲ್ಲೇಖಿಸಿದ ಡಿ.ಎಸ್. ಅರುಣ್, ಈಗಾಗಲೇ ಕಾರ್ಯಾರಂಭಿಸಿರುವ ಕೈಗಾರಿಕೆಗಳ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉದ್ಯಮ ಸಚಿವ ಎಂ.ಬಿ. ಪಾಟೀಲ್, ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ಪರಿಸರ ಅನುಮತಿ ಶೀಘ್ರ ನೀಡಲಾಗುವುದು ಎಂದು ಸದನದಲ್ಲಿ ಭರವಸೆ ನೀಡಿದರು.
Kshetra Samachara
17/12/2025 06:25 pm
LOADING...