ಶಿವಮೊಗ್ಗ : ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಶಾಸಕ ಚನ್ನಬಸಪ್ಪ ಗಮನ ಸೆಳೆದರು.ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತಾವಧಿ ಮುಕ್ತಾಯಗೊಂಡು ದೀರ್ಘಕಾಲವಾಗಿದ್ದರೂ ಚುನಾವಣೆ ನಡೆಯದ ಕಾರಣ, ಸ್ಥಳೀಯ ಆಡಳಿತ ವ್ಯವಸ್ಥೆ ಸಂಪೂರ್ಣ ಕುಂಠಿತಗೊಂಡಿರುವ ಬಗ್ಗೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಸುರೇಶ್ ಅವರ ಗಮನ ಸೆಳೆಯಲಾಯಿತು.
ಚುನಾಯಿತ ಸಮಿತಿಗಳಿಲ್ಲದೆ ಪಾಲಿಕೆ ಮತ್ತು ನಗರಸಭೆಗಳಲ್ಲಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದರಿಂದ ಸಾರ್ವಜನಿಕ ಕಾಮಗಾರಿಗಳು ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕುಂಠಿತಗೊಂಡಿದೆ. ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸದಿರುವುದು ಪ್ರಜಾಪ್ರಭುತ್ವದ ವಿಕೇಂದ್ರೀಕರಣ ವ್ಯವಸ್ಥೆಗೆ ಮಾರಕವಾಗಿದೆ. ಅಧಿಕಾರಿಗಳ ಆಡಳಿತದಿಂದಾಗಿ ಸಾರ್ವಜನಿಕರ ದೂರುಗಳಿಗೆ ಸ್ಪಂದನೆ ಸಿಗುತ್ತಿಲ್ಲ. ವಿಶೇಷವಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾಯಿತ ಅವಧಿಯು 2023 ನವೆಂಬರ್ 27ರಂದೇ ಮುಕ್ತಾಯಗೊಂಡಿದ್ದು, ಈ ಸಂಬಂಧ ಚುನಾವಣೆ ನಡೆಸುವ ಬಗ್ಗೆ ಈಗಾಗಲೇ 2024 ಫೆಬ್ರವರಿ 7 ರಂದು ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಆದರೆ, ಪಾಲಿಕೆಯ ವ್ಯಾಪ್ತಿಗೆ ಹೊಸ ಪ್ರದೇಶಗಳ ಸೇರ್ಪಡೆ ಹಾಗೂ ವಾರ್ಡ್‌ಗಳ ಮೀಸಲಾತಿ ಪ್ರಕ್ರಿಯೆಗಳು ಇನ್ನೂ ಅಂತಿಮ ಹಂತ ತಲುಪದಿರುವುದು ಚುನಾವಣಾ ವಿಳಂಬಕ್ಕೆ ಕಾರಣವಾಗಿದೆ ಎಂದರು.ಸಚಿವರು ಈ ವಿಷಯದ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಕಾನೂನಾತ್ಮಕ ಅಡೆತಡೆಗಳನ್ನು ನಿವಾರಿಸಿ ಶೀಘ್ರದ ಚುನಾವಣೆ ನಡೆಸುವ ಭರವಸೆ ನೀಡಿದರು.
PublicNext
17/12/2025 07:38 pm
LOADING...