ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ತೆರೆ ಬಿದ್ದ ಬೆನ್ನಲ್ಲೇ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಂಸದರಿಗಾಗಿ ಚಹಾ ಕೂಟವೊಂದನ್ನು ಆಯೋಜಿಸಿದ್ದರು. ಈ ಬಾರಿಯ ಚಹಾ ಕೂಟದಲ್ಲಿ ಕಳೆದ ಅಧಿವೇಶನದಲ್ಲಿ ಬಹಿಷ್ಕರಿಸಿದ್ದ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಭಾಗವಹಿಸಿದ್ದು ರಾಜಕೀಯ ವಲಯದಲ್ಲಿ ವಿಶೇಷ ಗಮನ ಸೆಳೆಯಿತು. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗೈರುಹಾಜರಾಗಿದ್ದರೂ, ಅವರ ಬದಲಿಗೆ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾಧ್ರಾ ಭಾಗವಹಿಸಿದ್ದರು.
ಸುಮಾರು ಮೂರು ವಾರಗಳ ಕಾಲ ತೀಕ್ಷ್ಣ ರಾಜಕೀಯ ಆರೋಪ-ಪ್ರತ್ಯಾರೋಪಗಳಿಂದ ಕಾವೇರಿದ್ದ ಅಧಿವೇಶನದ ನಂತರ, ಈ ಚಹಾ ಕೂಟ ಸಂಸದರ ನಡುವೆ ಸೌಹಾರ್ದಯುತ ಕ್ಷಣಗಳನ್ನು ಸೃಷ್ಟಿಸಿತು. ಸ್ಪೀಕರ್ ಕಚೇರಿಯಿಂದ ಬಿಡುಗಡೆಗೊಂಡ ಚಿತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸ್ಪೀಕರ್ ಓಂ ಬಿರ್ಲಾ ಅವರ ಪಕ್ಕದಲ್ಲಿ ಪ್ರಿಯಾಂಕಾ ಗಾಂಧಿ ವಾಧ್ರಾ ಕುಳಿತಿರುವುದು ಕಂಡುಬಂತು.
ಈ ಸಭೆಯಲ್ಲಿ ಹಲವು ಲಘು ಹಾಸ್ಯ ಪ್ರಸಂಗಗಳು ನಡೆದವು. ಪ್ರಿಯಾಂಕಾ ಗಾಂಧಿ ಅವರು ತಮ್ಮ ಕ್ಷೇತ್ರ ವಯನಾಡಿನಲ್ಲಿ ದೊರೆಯುವ ಗಿಡಮೂಲಿಕೆಗಳನ್ನು ಅಲರ್ಜಿಗೆ ಬಳಸುವುದಾಗಿ ಹಂಚಿಕೊಂಡಾಗ, ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಗುತ್ತಿರುವುದು ಕಂಡುಬಂತು. ಇದೇ ಸಂದರ್ಭದಲ್ಲಿ ಪ್ರಧಾನಿಯವರ ವಿದೇಶಿ ಪ್ರವಾಸಗಳ ಕುರಿತು ಪ್ರಿಯಾಂಕಾ ಪ್ರಶ್ನಿಸಿದಾಗ, ಮೋದಿ ಅವರು 'ಪ್ರವಾಸ ಚೆನ್ನಾಗಿತ್ತು' ಎಂದು ನಗುಮುಖದಿಂದ ಪ್ರತಿಕ್ರಿಯಿಸಿದರು.
ಚಹಾ ಕೂಟದಲ್ಲಿ ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್, ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ ಹಾಗೂ ಸಿಪಿಐ ನಾಯಕಿ ಡಿ. ರಾಜಾ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು.
PublicNext
19/12/2025 10:38 pm