ಬೆಂಗಳೂರು: ಸಮಾಜ ಘಾತುಕ ವ್ಯಕ್ತಿಗಳ ಜೊತೆಗೆ ಸಂಪರ್ಕ ಹೊಂದಿದ್ದ ಹಾಗೂ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ತನ್ನ ಮನೆಗೆ ಕರೆಸಿ ಜನ್ಮದಿನ ಆಚರಿಸಿಕೊಂಡಿದ್ದ ಆರೋಪದಡಿ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ್ ಅವರನ್ನು ಅಮಾನತುಗೊಳಿಸಲಾಗಿದೆ. ಈ ಘಟನೆ ಪೊಲೀಸ್ ಇಲಾಖೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರೌಡಿಗಳು, ಕ್ರಿಮಿನಲ್‌ಗಳು ಮತ್ತು ಬಿಲ್ಡಪ್ ರಾಜರೊಂದಿಗೆ ಫೋಟೋ ತೆಗೆಸಿಕೊಳ್ಳುವ ಮುನ್ನ ಎಚ್ಚರ ವಹಿಸುವಂತೆ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನಾಗರಾಜ್, ಲ್ಯಾಂಡ್ ಗ್ರಾಬಿಂಗ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ 'ದಾಸ' ಎಂಬಾತನನ್ನು ತನ್ನ ಮನೆಗೆ ಆಹ್ವಾನಿಸಿ ಜನ್ಮದಿನ ಆಚರಿಸಿಕೊಂಡಿದ್ದರು. ಈ ವೇಳೆ ಕೇಕ್ ಕತ್ತರಿಸಿ, ದಾಸನಿಂದ ಸನ್ಮಾನವನ್ನೂ ಸ್ವೀಕರಿಸಿದ್ದರು. ಈ ಸಂಬಂಧದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಪಿಎಸ್‌ಐ ನಾಗರಾಜ್ ಜನ್ಮದಿನ ಆಚರಿಸಿಕೊಂಡಿದ್ದ ದಾಸ ಎಂಬಾತನ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಲ್ಯಾಂಡ್ ಗ್ರಾಬಿಂಗ್, ಹಲ್ಲೆ, ಬೆದರಿಕೆ ಸೇರಿದಂತೆ ರಾಜಾನುಕುಂಟೆ, ಚಿಕ್ಕಜಾಲ, ಯಲಹಂಕ ನ್ಯೂಟೌನ್ ಸೇರಿದಂತೆ ಹಲವಾರು ಠಾಣೆಗಳಲ್ಲಿ ಆತ ಆರೋಪಿಯಾಗಿದ್ದಾನೆ. ಇಂತಹ ಸಮಾಜಘಾತುಕ ವ್ಯಕ್ತಿಯೊಂದಿಗೆ ಪೊಲೀಸ್ ಅಧಿಕಾರಿಯ ಸಂಪರ್ಕ ಗಂಭೀರ ಸ್ವರೂಪದ್ದಾಗಿದೆ.
ಘಟನೆ ವೈರಲ್ ಆಗುತ್ತಿದ್ದಂತೆ, ಬೆಂಗಳೂರು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಕೂಡಲೇ ವರದಿ ನೀಡುವಂತೆ ಸೂಚಿಸಿದ್ದರು. ವರದಿ ಪರಿಶೀಲಿಸಿದ ಪೂರ್ವ ವಲಯ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಪಿಎಸ್‌ಐ ನಾಗರಾಜ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ವರ್ತನೆ ಪೊಲೀಸ್ ಇಲಾಖೆಯ ಶಿಸ್ತಿಗೆ ವಿರುದ್ಧವಾಗಿದ್ದು, ಇಂತಹ ಸಂಪರ್ಕ ಸಾರ್ವಜನಿಕರಿಗೆ ಭಯ ಉಂಟು ಮಾಡುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಮುಂದೆ ಯಾವುದೇ ಪೊಲೀಸ್ ಅಧಿಕಾರಿಗಳು ರೌಡಿಗಳು, ಕ್ರಿಮಿನಲ್‌ಗಳು ಅಥವಾ ಸಮಾಜಘಾತುಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವವರ ಜೊತೆ ಸ್ನೇಹ, ವ್ಯವಹಾರ ಅಥವಾ ಪಾರ್ಟಿಗಳನ್ನು ಸಹಿಸುವುದಿಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಈ ಮೂಲಕ ಇಲಾಖೆಯ ಎಲ್ಲಾ ಸಿಬ್ಬಂದಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇಂತಹ ಘಟನೆಗಳು ಸಾರ್ವಜನಿಕರಲ್ಲಿ ಪೊಲೀಸರ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತವೆ ಮತ್ತು ಜನರು ಭಯವಿಲ್ಲದೆ ಪೊಲೀಸ್ ಠಾಣೆಗೆ ಬರಲು ಸಾಧ್ಯವಾಗುವುದಿಲ್ಲ ಎಂಬುದನ್ನು ಆಯುಕ್ತರು ಒತ್ತಿ ಹೇಳಿದ್ದಾರೆ.
PublicNext
20/12/2025 01:10 pm