ಬೆಂಗಳೂರು: ನಗರ ಬನಶಂಕರಿ ಪೊಲೀಸ್ ಠಾಣವ್ಯಾಪ್ತಿಯಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬನಿಗೆ ಕಾಲಿನಿಂದ ಒದ್ದು, ಜುಟ್ಟು ಹಿಡಿದು ಎಳೆದಾಡಿ ಕ್ರೂರವಾಗಿ ಹಲ್ಲೆ ನಡೆಸಿದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಇದೇ ತಿಂಗಳ 14 ರಂದು ನಡೆದ ಈ ಕೃತ್ಯದ ಸಿಸಿಟಿವಿ ದೃಶ್ಯಗಳು ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ.
ಆರೋಪಿ ರಂಜನ್ ಎಂಬಾತ ಬಾಲಕ ನೀಲ್ ಜೈನ್ ಮೇಲೆ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾನೆ. ನೀಲ್ ಜೈನ್, ಮನೆಯ ಬಳಿ ಆಟವಾಡುತ್ತಿದ್ದಾಗ ಆರೋಪಿ ರಂಜನ್ ಫುಟ್ಬಾಲ್ ಒದ್ದಂತೆ ಕಾಲಿನಿಂದ ಒದ್ದು ಗಾಯಗೊಳಿಸಿದ್ದಾನೆ. ಕೃತ್ಯದ ಸಿಸಿಟಿವಿ ದೃಶ್ಯದಲ್ಲಿ, ಬಾಲಕನನ್ನು ಒದ್ದ ನಂತರ ಆತನ ಜುಟ್ಟು ಹಿಡಿದು ಎಳೆದಾಡುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಈ ಘಟನೆಯಿಂದ ಬಾಲಕನ ಮೈಗೆ ಗಾಯಗಳಾಗಿವೆ.
ಆರೋಪಿ ರಂಜನ್ ಕೇವಲ ನೀಲ್ ಜೈನ್ ಮೇಲಷ್ಟೇ ಅಲ್ಲದೆ, ಆ ಪ್ರದೇಶದ ಇತರ ಮಕ್ಕಳಿಗೂ ಪದೇ ಪದೇ ತೊಂದರೆ ನೀಡುತ್ತಿದ್ದ, ಹೊಡೆಯುತ್ತಿದ್ದ ಮತ್ತು ಬೈಯುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜಿಮ್ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ ರಂಜನ್, ಕಳೆದ ಮೂರು ತಿಂಗಳಿನಿಂದ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ತಿಳಿದುಬಂದಿದೆ. ಮೂರು ತಿಂಗಳ ಹಿಂದೆ ಸ್ವಯಂ ಅಪಘಾತಕ್ಕೀಡಾಗಿದ್ದ ಆತ, ಸದ್ಯ ಮಧುರೈನಲ್ಲಿರುವ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಹಾಗೂ ಅಬ್ಸರ್ವೇಷನ್ ಹೋಮ್‌ನಲ್ಲಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲಕನ ತಾಯಿ ದೀಪಿಕಾ ಜೈನ್ ಬನಶಂಕರಿ ಪೊಲೀಸ್ ಠಾಣೆಯಲ್ಲಿ ರಂಜನ್ ವಿರುದ್ಧ ದೂರು ದಾಖಲಿಸಿದ್ದರು. ದೂರಿನನ್ವಯ ಕಾರ್ಯಪ್ರವೃತ್ತರಾದ ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆದರೆ, ಸದ್ಯ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಮಕ್ಕಳ ಮೇಲೆ ನಡೆದ ಈ ಅಮಾನವೀಯ ಹಲ್ಲೆ ಪ್ರಕರಣವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತೀವ್ರವಾಗಿ ಖಂಡಿಸಿದೆ. ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಪ್ರತಿಕ್ರಿಯಿಸಿ, "ಮಕ್ಕಳಿಗೆ 18 ವರ್ಷ ಪೂರ್ಣಗೊಳ್ಳುವವರೆಗೆ ಅವರಿಗೆ ಗೌರವಯುತವಾಗಿ ಬದುಕಲು ಅವಕಾಶ ನೀಡಬೇಕು. ಈ ರೀತಿಯ ಘಟನೆಗಳು ಪದೇ ಪದೇ ನಡೆಯುವುದು ಒಳ್ಳೆಯ ಬೆಳವಣಿಗೆಯಲ್ಲ," ಎಂದಿದ್ದಾರೆ. ಅಲ್ಲದೆ, ರಾಜ್ಯ ಮಕ್ಕಳ ಆಯೋಗವು ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿರುವ ಆಯೋಗ, ದಕ್ಷಿಣ ವಿಭಾಗದ ಡಿಸಿಪಿಗೆ ಪತ್ರ ಬರೆದಿದ್ದು, ಘಟನೆ ಕುರಿತು ಕೈಗೊಂಡ ಕ್ರಮಗಳ ವರದಿಯನ್ನು ಮೂರು ದಿನದೊಳಗೆ ಸಲ್ಲಿಸುವಂತೆ ಸೂಚಿಸಿದೆ.
ಸದ್ಯ ಮಕ್ಕಳ ಪಾಲಿನ ದುರುಳನಿಗೆ ತಕ್ಕ ಪಾಠ ಕಲಿಸುವ ಅನಿವಾರ್ಯತೆ ಎದುರಾಗಿದೆ. ಇಲ್ಲದಿದ್ರೆ ಏರಿಯಾದಲ್ಲಿ ಮತ್ತಷ್ಟು ಮಕ್ಕಳಿಗೆ ಈತನಿಂದ ಅಪಾಯ ತಪ್ಪಿದ್ದಲ್ಲ.
PublicNext
20/12/2025 05:19 pm