ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ರಾಜಧಾನಿಯಲ್ಲಿ ನಡೆದ ಭೀಕರ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಜೋಹಾನ್ಸ್‌ಬರ್ಗ್‌ನಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಬೆಕರ್ಸ್‌ಡಾಲ್ ಪ್ರದೇಶದಲ್ಲಿ ಈ ಗುಂಡಿನ ದಾಳಿ ನಡೆದಿದೆ. ಯಾವುದೇ ಸುಳಿವು ನೀಡದೆ ಮದ್ಯದಂಗಡಿಗೆ ನುಗ್ಗಿದ ಬಂದೂಕುಧಾರಿಗಳು ಏಕಾಏಕಿ ಜನಸಮೂಹದ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ತಕ್ಷಣ ಧಾವಿಸಿದ ಸ್ಥಳೀಯ ಪೊಲೀಸರು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ತನಿಖೆ ಆರಂಭಿಸಲಾಗಿದ್ದು, ಈವರೆಗೆ ಯಾವುದೇ ಶಂಕಿತರನ್ನು ಗುರುತಿಸಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆ ಕುರಿತು ಗೌಟೆಂಗ್ ಪ್ರಾಂತ್ಯದ ಪೊಲೀಸ್ ವಕ್ತಾರ ಬ್ರೆಂಡಾ ಮುರಿಡಿಲಿ ಮಾತನಾಡಿ, ಗುಂಡಿನ ದಾಳಿ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ ಎಂದಿದ್ದಾರೆ. ಸದ್ಯ ಮೃತರ ವಿವರಗಳನ್ನು ಕಲೆಹಾಕಲಾಗುತ್ತಿದೆ. ಅಲ್ಲದೆ, ದಾಳಿ ನಡೆದ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
PublicNext
21/12/2025 02:14 pm
LOADING...