ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ನಡೆದ 4. 5 ಕೆಜಿ ಚಿನ್ನದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಉನ್ನಿಕೃಷ್ಣನ್ ರೂಪಿಸಿದ್ದ ಮಾಸ್ಟರ್ ಪ್ಲ್ಯಾನ್ ಕೇಳಿ ಕೇರಳ ಎಸ್‌ಐಟಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ತನಿಖೆ ವೇಳೆ ಬಯಲಾದ ಈ ಸಿನಿಮೀಯ ದರೋಡೆ ಪ್ಲ್ಯಾನ್ ಕೇಳಿ ತಮಗೆ ಸಿನಿಮಾ ನೋಡಿದ ಅನುಭವವಾಯಿತು ಎಂದು ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಎಸ್‌ಐಟಿ ಮಾಹಿತಿ ಪ್ರಕಾರ, 2019ರ ಜುಲೈನಲ್ಲಿ ದೇಗುಲದಿಂದ ಚಿನ್ನದ ಬಾಗಿಲುಗಳನ್ನು ಕಳುಹಿಸುವ ಮೊದಲು ತೂಕ ಮಾಡಿದಾಗ ಅದು 42.8 ಕೆಜಿ ಇತ್ತು. ಆದರೆ ಕೇರಳದಿಂದ ಚೆನ್ನೈನಲ್ಲಿರುವ ಸ್ಮಾರ್ಟ್ ಕ್ರಿಯೇಷನ್ಸ್ ಸಂಸ್ಥೆಯನ್ನು ತಲುಪಿದಾಗ ಅದರ ತೂಕ 38.25 ಕೆಜಿ ಆಗಿತ್ತು. ಅಂದರೆ, ಅಯ್ಯಪ್ಪನ ದೇಗುಲದ ಚಿನ್ನದ ಬಾಗಿಲು ಹಾಗೂ ದ್ವಾರಪಾಲಕರು ಕೇರಳದಿಂದ ಚೆನ್ನೈಗೆ ಪ್ರಯಾಣಿಸುವ ವೇಳೆಗೆ ಸುಮಾರು 4.55 ಕೆಜಿ ಚಿನ್ನ ಕಣ್ಮರೆಯಾಗಿತ್ತು. ಪ್ರಯಾಣದ ನಡುವೆ ಕೇರಳ, ಕರ್ನಾಟಕ, ಆಂಧ್ರಪ್ರದೇಶದ ಕೆಲವು ಪ್ರಭಾವಿಗಳ ಮನೆಗಳಲ್ಲಿ ಪೂಜೆ ಮಾಡಿಸಲಾಗಿತ್ತು. ಈ ಪೂಜೆಯ ನೆಪದಲ್ಲಿ ನಡೆದ ಅಸಲಿಯತ್ತು ಈಗ ಬಯಲಾಗಿದೆ: ಪೂಜೆ ನೆಪದಲ್ಲಿ ಚಿನ್ನವನ್ನು ಕೊಂಡೊಯ್ದಿದ್ದ ಸಂದರ್ಭದಲ್ಲಿಯೇ ಕಳ್ಳತನ ಮಾಡಲಾಗಿದೆ ಎಂದು ಆರೋಪಿ ಉನ್ನಿಕೃಷ್ಣನ್ ಬಾಯ್ಬಿಟ್ಟಿದ್ದಾನೆ.
2019ರಲ್ಲಿ ಅಯ್ಯಪ್ಪ ಸ್ವಾಮಿ ದೇಗುಲದ ಎರಡು ಬಾಗಿಲು ಹಾಗೂ ಎರಡು ದ್ವಾರಪಾಲಕರಿಗೆ ಚಿನ್ನದ ಮರುಲೇಪನ ಮಾಡಲು ನಿರ್ಧರಿಸಲಾಗಿತ್ತು. ತಮಿಳುನಾಡು ಮೂಲದ ಸ್ಮಾರ್ಟ್ ಕ್ರಿಯೇಷನ್ಸ್ ಸಂಸ್ಥೆ ಉಚಿತವಾಗಿ ಮರುಲೇಪನ ಮಾಡುವುದಾಗಿ ಮನವಿ ಸಲ್ಲಿಸಿದ್ದರಿಂದ, ಈ ಕೆಲಸವನ್ನು ಆ ಕಂಪನಿಗೆ ವಹಿಸಲಾಗಿತ್ತು.
ಚಿನ್ನದ ಬಾಗಿಲುಗಳನ್ನು ಚೆನ್ನೈಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಸಿನಿಮಾ ನಟರು ಮತ್ತು ರಾಜಕಾರಣಿಗಳ ಮನೆಗೆ ಪೂಜೆಗಾಗಿ ಒಯ್ಯಲಾಗಿತ್ತು. ಈ ಹಿನ್ನೆಲೆಯಲ್ಲಿ, ಎಸ್‌ಐಟಿ ಅಧಿಕಾರಿಗಳು ಇದೀಗ ಕೆಲವು ಪ್ರಮುಖ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಅವುಗಳೆಂದರೆ: ನಟರು, ರಾಜಕಾರಣಿಗಳ ಮನೆಗೆ ಪೂಜೆಗೆ ಕೊಂಡೊಯ್ದದ್ದು ಏಕೆ? ಚಿನ್ನದ ಬಾಗಿಲು ಮರುಲೇಪನ ಮಾಡುವ ಮೊದಲು ಕೇರಳ ಹೈಕೋರ್ಟ್‌ನ ಅನುಮತಿ ಪಡೆದಿಲ್ಲವೇಕೆ? ಪ್ರಭಾವಿ ಭಕ್ತರ ಮನೆಗೆ ಪೂಜೆಗೆ ಒಯ್ಯುವ ಯೋಜನೆಯನ್ನು ರೂಪಿಸಿದ್ದು ಯಾರು? ಹಿಂದೆ ಬಾಗಿಲುಗಳಿಗೆ ಚಿನ್ನಲೇಪನ ಮಾಡಿದ ಕಂಪನಿಯನ್ನು ಬಿಟ್ಟು ಈಗ ಸ್ಮಾರ್ಟ್ ಕ್ರಿಯೇಷನ್ಸ್ ಕಂಪನಿಗೆ ಮರುಲೇಪನಕ್ಕೆ ಕೊಟ್ಟಿದ್ದು ಏಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಪ್ರಕರಣದ ಪ್ರಮುಖ ಸೂತ್ರಧಾರರನ್ನು ಪತ್ತೆಹಚ್ಚಲು ಎಸ್‌ಐಟಿ ಮುಂದಾಗಿದೆ.
PublicNext
21/12/2025 06:41 pm