ಶಿರಹಟ್ಟಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಇವರ ಆದೇಶದಂತೆ, ಜನವರಿ 3, 2026 ರಿಂದ 90 ದಿನಗಳ ಕಾಲ 'ಮಧ್ಯಸ್ಥಿಕೆ ರಾಷ್ಟ್ರಕ್ಕಾಗಿ' ವಿಶೇಷ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಇದೊಂದು ಸುವರ್ಣಾವಕಾಶವಾಗಿದೆ.
ಯಾವ ಪ್ರಕರಣಗಳನ್ನು ಇತ್ಯರ್ಥಪಡಿಸಬಹುದು?
ಈ ಅಭಿಯಾನದಲ್ಲಿ ವೈವಾಹಿಕ ಹಾಗೂ ಕೌಟುಂಬಿಕ ಪ್ರಕರಣಗಳು, ಮೋಟಾರು ಅಪಘಾತ ನ್ಯಾಯಾಧೀಕರಣದ ಪ್ರಕರಣಗಳು, ಚೆಕ್ ಅಮಾನ್ಯದ ಪ್ರಕರಣಗಳು, ವಾಣಿಜ್ಯ ಹಾಗೂ ಸೇವಾ ಪ್ರಕರಣಗಳು, ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ಗ್ರಾಹಕ ವ್ಯಾಜ್ಯ ಪ್ರಕರಣಗಳು, ಡಿ.ಆರ್.ಟಿ ಪ್ರಕರಣಗಳು, ಪಾಲುದಾರಿಕೆ ಪ್ರಕರಣಗಳು, ಭೂ-ಸ್ವಾಧೀನ ಪ್ರಕರಣಗಳು, ಹಾಗೂ ಇತರೆ ಸಿವಿಲ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ.
ಅವಕಾಶದ ಸದುಪಯೋಗ ಪಡೆದುಕೊಳ್ಳಿ
ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸುವ ಪಕ್ಷಗಾರರು ಮತ್ತು ಸಾರ್ವಜನಿಕರು, ನ್ಯಾಯಾಲಯಗಳ ಮೂಲಕ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ಸೂಚಿಸಬಹುದಾಗಿದೆ. ಲಕ್ಷೇಶ್ವರ ತಾಲ್ಲೂಕು ನ್ಯಾಯಾಲಯಗಳ ಆವರಣದಲ್ಲಿರುವ ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಉಭಯ ಪಕ್ಷಗಾರರನ್ನು ಕರೆಸಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಲಾಗಿದೆ. ಶಿರಹಟ್ಟಿ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಲಕ್ಷೇಶ್ವರ ತಾಲ್ಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಶ್ರೀ ಭರತ್ ಯೋಗೀಶ್ ಕರಗುದರಿ ಮತ್ತು ಶ್ರೀ ಸತೀಶ್ ಎಂ. ರವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
PublicNext
20/01/2026 03:15 pm