ಚಿಕ್ಕಮಗಳೂರು: ಸಮೀಪದ ಜಾವಣಿಗೆ ಸೀಮೆಯ ಹದಿನಾರು ಹಳ್ಳಿಗಳ ಪಾಳೇಗಾರಿಕೆ ಇತಿಹಾಸವನ್ನು ಸಾರುವ 'ಪಾಳೆಯಪಟ್ಟು' ಕಾದಂಬರಿ ನಾಳೆ (ಜನವರಿ 25, ಭಾನುವಾರ) ನಗರದ ರೋಟರಿ ಹಾಲ್‌ನಲ್ಲಿ ಬಿಡುಗಡೆಯಾಗಲಿದೆ. ಐಐಪಿ ಪ್ರಕಾಶನ, ಕರ್ನಾಟಕ ವಿಕಾಸರಂಗ ಹಾಗೂ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಲೇಖಕ ಕುಂದೂರು ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಖ್ಯಾತ ಸಾಹಿತಿ ನಾಡೋಜ ಕುಂ. ವೀರಭದ್ರಪ್ಪ ಅವರು ಕಾದಂಬರಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಐಐಪಿ ಪ್ರಕಾಶನದ ಮುಖ್ಯಸ್ಥ ಬೆಣ್ಣೂರು ನಂಜೇಶ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಗತಿಸಿ ಹೋದ ಇತಿಹಾಸವನ್ನು ಮುಂದಿನ ತಲೆಮಾರಿಗೆ ಅಕ್ಷರ ರೂಪದಲ್ಲಿ ದಾಟಿಸುವ ಜವಾಬ್ದಾರಿಯನ್ನು ಈ ಕೃತಿ ಹೊಂದಿದೆ ಎಂದು ಲೇಖಕರು ಆಶಯ ವ್ಯಕ್ತಪಡಿಸಿದ್ದಾರೆ.
ಇದೇ ವೇದಿಕೆಯಲ್ಲಿ ಸೃಜನಶೀಲ ಬರಹಗಾರ ತರೀಕೆರೆಯ ಮನಸುಳಿ ಮೋಹನ್ ಅವರಿಗೆ 'ಕುಂಭಕ ಸಾಹಿತ್ಯ ಸಿರಿ 2026' ಪ್ರಶಸ್ತಿ ಹಾಗೂ ಕನ್ನಡ ಪ್ರೇಮಿ ಮೂಡಿಗೆರೆಯ ಜಗದೀಶ್ ಮರಾಬೈಲ್ ಅವರಿಗೆ 'ಕನ್ನಡಕ್ಕಾಗಿ ದುಡಿದವರಿಗೆ ಸನ್ಮಾನ' ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದ ಭಾಗವಾಗಿ ಮಲ್ಲಿಗೆ ಸುಧೀರ್ ಅವರಿಂದ ಗೀತ ಗಾಯನ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಡಿ. ಎಂ. ಮಂಜುನಾಥಸ್ವಾಮಿ, ಹಿರೇಮಗಳೂರು ಪುಟ್ಟಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Kshetra Samachara
24/01/2026 09:13 pm