ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆಯಲ್ಲಿ ಭಾರಿ ಅಕ್ಕಿ ದರೋಡೆ - ಅಂತರರಾಜ್ಯ ಕಳ್ಳರ ಬಂಧನ!

ಬಾಗಲಕೋಟೆ: ಜಿಲ್ಲೆಯಲ್ಲಿ ನಡೆದ ಭಾರಿ ಅಕ್ಕಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಪೊಲೀಸರು ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

25 ಟನ್ ಅಕ್ಕಿ ಲಾರಿಯನ್ನು ದರೋಡೆ ಮಾಡಿದ್ದ ಖದೀಮರನ್ನು ಮಹಾಲಿಂಗಪುರ ಠಾಣಾ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಘಟನೆ ವಿವರ

ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಠಾಣಾ ವ್ಯಾಪ್ತಿಯ ಸೈದಾಪುರ ಗ್ರಾಮದ ಬಳಿ ಜನವರಿ 10ರಂದು ಈ ದರೋಡೆ ನಡೆದಿದೆ. ಗಂಗಾವತಿಯಿಂದ ಕೊಲ್ಲಾಪುರಕ್ಕೆ ತೆರಳುತ್ತಿದ್ದ ಅಕ್ಕಿ ತುಂಬಿದ ಲಾರಿಯನ್ನು ಇನ್ನೋವಾ ಮತ್ತು ಸ್ಕಾರ್ಪಿಯೋ ಕಾರುಗಳಲ್ಲಿ ಬಂದಿದ್ದ ಆರೋಪಿಗಳು ಅಡ್ಡಗಟ್ಟಿದ್ದಾರೆ.

ಲಾರಿ ಚಾಲಕನಿಗೆ ಹಲ್ಲೆ ನಡೆಸಿ, ಅದರಲ್ಲಿದ್ದ ಅಂದಾಜು 61 ಸಾವಿರ ರೂಪಾಯಿ ಮೌಲ್ಯದ 25 ಟನ್ ಅಕ್ಕಿಯನ್ನು ದರೋಡೆ ಮಾಡಿದ್ದರು. ಈ ಬಗ್ಗೆ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಹಾಲಿಂಗಪುರ ಪೊಲೀಸರು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಮಖಂಡಿಯ ಸಂಜು ವಿಠ್ಠಲ ಕಡಕೋಳ, ಮೈಗೂರು ದ ಸಂಗಮೇಶ ಅರ್ಜುನ ಕಾಂಬಳೆ, ವಿಶ್ವನಾಥ ಪ್ರಭುಲಿಂಗ ಲಗಳಿ, ಸಂತೋಷ ಯಮನಪ್ಪ ಕಾಂಬಳೆ, ಜಾಕೀರಹುಸೇನ ಮಕಾನದಾರ, ಫಯಾಜ್ ಕರಿಂಶಾ ಮಕಾಂದಾರ, ಸಚೀನ ಅಶೋಕ ನಾಯಿಕೊಡಿ, ಅರ್ಪಾತ ತಾಳಿಕೋಟಿ ಸೇರಿದಂತೆ ಎಂಟು ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದರು.

ಈ ಪೈಕಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 3 ಲಕ್ಷ 90 ಸಾವಿರ ನಗದು ಮತ್ತು ದರೋಡೆಗೆ ಬಳಸಿದ್ದ ಎರಡು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಹೆಚ್ಚುವರಿ ಎಸ್ಪಿ ಪ್ರಸನ್ನಕುಮಾರ ದೇಸಾಯಿ ಮತ್ತು ಡಿವೈಎಸ್‌ಪಿ ರೋಷನ್ ಜಮೀರ ಅವರ ಮಾರ್ಗದರ್ಶನದಲ್ಲಿ ಸಿಪಿಐ ಎಚ್.ಆರ್.ಪಾಟೀಲ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಅಂದಾಜು 61 ಸಾವಿರ ರೂಪಾಯಿ ಮೌಲ್ಯದ 25 ಟನ್ ಅಕ್ಕಿ ದರೋಡೆ ಮಾಡಿದ್ದ ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯವನ್ನು ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಶ್ಲಾಘಿಸಿದ್ದು, ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ.

Edited By : Shivu K
PublicNext

PublicNext

25/01/2026 04:25 pm

Cinque Terre

15.71 K

Cinque Terre

0