ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಳೆ ಮಾಡೆಲ್ ಕಾರು, ಬೈಕ್‌ಗಳ ಪ್ರದರ್ಶನ- ಜನಾಕರ್ಷಣೆಗೆ ಪಾತ್ರವಾದ ಬಿ.ಆರ್.ಶೆಟ್ಟಿ ಪುತ್ರನ ಪುಟ್ಟ ಕಾರು

ಮಂಗಳೂರು: 'ಕಾರ್ ಕಾರ್ ಕಾರ್ ಎಲ್ನೋಡಿ ಕಾರ್' ಎಂಬ 'ನನ್ನ ಪ್ರೀತಿಯ ಹುಡುಗ' ಸಿನಿಮಾದ ಹಾಡು ಯಾರೂ ಮರೆತಿರಲಿಕ್ಕಿಲ್ಲ. ಇಲ್ಲಿರೋದು ಹಳೆಯ ಮಾಡೆಲ್ ಕಾರುಗಳು, ಬೈಕ್‌ಗಳು. ಆದರೆ, ಜನರು ಮಾತ್ರ ಈ ಹಳೆಯ ಕಾರು - ಬೈಕ್‌ಗಳಿಗೆ ಫಿದಾ ಆಗಿ ಅದರ ಅಂದ- ಚೆಂದವನ್ನು ಕಣ್ತುಂಬಿಕೊಂಡರು.

ಈ ದೃಶ್ಯ ಕಂಡು ಬಂದಿರೋದು ಮಂಗಳೂರು ಮೋಟಾರ್ಸ್ ಫೋರ್ಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ನಡೆದ 24ನೇ ವರ್ಷದ ವಿಂಟೇಜ್ ಕ್ಲಾಸಿಕ್ ಕಾರು ಹಾಗೂ ಬೈಕ್‌ಗಳ ಪ್ರದರ್ಶನದಲ್ಲಿ. ಸುಮಾರು 22ರಷ್ಟು ಕಾರುಗಳು, 5 ಜೀಪ್‌ಗಳು ಹಾಗೂ 10ರಷ್ಟು ಬೈಕ್‌ಗಳಿತ್ತು. ಈ ವಾಹನಗಳು, ಸುಸ್ಥಿತಿಯಲ್ಲಿದ್ದು, ಈಗಲೂ ರಸ್ತೆಯಲ್ಲಿ ಸಂಚರಿಸುತ್ತದೆ.

1959ರ ಚಾವರ್ಲೇಟ್, 1946ರ ಫೋರ್ಡ್, 1956ರ ಮರ್ಸಿಡಿಸ್, 1952ರ ಮೋರಿಸ್ ಮೈನರ್, 1967ರ ವೋಕ್ಸ್ ವ್ಯಾಗನ್, 1964ರ ಫಿಯೆಟ್, ಅಂಬಾಸಿಡರ್, 1948ರ ಮೋರಿಸ್ ಆಕ್ಸ್‌ಫರ್ಡ್ ಇಂಗ್ಲೆಂಡ್ ಕಾರುಗಳು, ಯುಎಸ್ಎ ಕಾರುಗಳು ಸೇರಿದಂತೆ ಎಕ್ಸ್ ಆರ್ಮಿ ಜೀಪ್‌ಗಳು, ಯಮಹಾ ಆರ್‌ಎಕ್ಸ್ ಝಡ್, 1975ರ ಬಜಾಜ್ ಚೇತಕ್, ಎಝ್ಡಿ, ಜಾವಾ, ಲ್ಯಾಂಬ್ರಟ್ಟಾ, 1929ರ ಜಾವಾ ಮುಂತಾದ ಬೈಕ್‌ಗಳು ಎಲ್ಲರ ಆಕರ್ಷಣೆಗೆ ಪಾತ್ರವಾಯಿತು.

ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿಯವರು ತಮ್ಮ ಪುತ್ರ ಸಣ್ಣದಿರುವಾಗ ಅಬುದಾಭಿಯಲ್ಲಿ ಆಟವಾಡಲು ಖರೀದಿಸಿದ್ದ ಮರ್ಸಿಡೀಸ್ ಎಸ್ಎಲ್ 500 ಮಿನಿಯೇಚರ್ ಕಾರು ಇಲ್ಲಿನ ವಿಶೇಷ ಆಕರ್ಷಣೆಯಾಗಿತ್ತು. 1980ರ ಮಾಡೆಲ್‌ನ ಈ ಕಾರನ್ನು ಬಳಿಕ ಮಂಗಳೂರಿಗೆ ತರಲಾಯಿತು. ಇದೀಗ ಈ ಕಾರು ಬಿ.ಆರ್.ಶೆಟ್ಟಿಯವರ ಸಂಬಂಧಿ ಡಾ. ಶಿಶಿರ್ ಶೆಟ್ಟಿಯವರ ಬಳಿಯಿದೆ. ಸುಸ್ಥಿತಿಯಲ್ಲಿರುವ ಈ ಕಾರನ್ನು ಡಾ.ಶಿಶಿರ್ ಶೆಟ್ಟಿ ಸೇರಿ ಮತ್ತೊಬ್ಬರು ಚಲಾಯಿಸಿ ಎಲ್ಲರಿಗೂ ಬೆರಗು ಹುಟ್ಟಿಸಿದರು.

ಈ ಹಳೆಯ ಮಾಡೆಲ್ ಕಾರು, ಬೈಕ್, ಜೀಪ್ ಪ್ರದರ್ಶನವನ್ನು ದ‌.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವೀಕ್ಷಿಸಿ ಸಂತೋಷಪಟ್ಟರು. ಬಳಿಕ ಹಳೆಯ ಮಾಡೆಲ್ ಕಾರಿನಲ್ಲಿ ರೌಂಡ್ ಹೊಡೆದರು.

ಬಂದವರೆಲ್ಲಾ ಕಾರು, ಬೈಕ್‌, ಜೀಪ್‌ಗಳ ಮುಂಭಾಗ ಫೋಟೋ ಹೊಡೆಸಿಕೊಳ್ಳುತ್ತಾ, ಸೆಲ್ಫಿ ತೆಗೆಯುತ್ತಾ ಸಂಭ್ರಮಪಟ್ಟರು. ಒಟ್ಟಿನಲ್ಲಿ ಹಳೆಯ ಮಾಡೆಲ್ ಕಾರುಗಳು, ಬೈಕ್‌ಗಳು ಮಂಗಳೂರು ಜನರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.

ವರದಿ- ವಿಶ್ವನಾಥ ಪಂಜಿಮೊಗರು

Edited By : Vinayak Patil
PublicNext

PublicNext

27/01/2026 08:37 am

Cinque Terre

17.62 K

Cinque Terre

0