ಶಿಡ್ಲಘಟ್ಟ: ಕಳೆದ 12 ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ಅವರನ್ನು ಜನವರಿ 26 ರಂದು ಕೇರಳದಲ್ಲಿ ಬಂಧಿಸಲಾಗಿತ್ತು. ಚಿಕ್ಕಬಳ್ಳಾಪುರ ಪೊಲೀಸರು ಬಂಧಿತ ರಾಜೀವ್ ಗೌಡರನ್ನು ಕರೆತಂದು ಪೊಲೀಸ್ ಗೆಸ್ಟ್‌ಹೌಸ್‌ನಲ್ಲಿ ಇರಿಸಿದ್ದರು. ಮಂಗಳವಾರ, ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ, ಪೊಲೀಸರು ಅವರನ್ನು ಶಿಡ್ಲಘಟ್ಟ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಮತ್ತು ಆದೇಶ ಕಾಯ್ದಿರಿಸುವಿಕೆ
ಮಧ್ಯಾಹ್ನ 3:40ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಲಾದ ರಾಜೀವ್ ಗೌಡ ಅವರ ಪ್ರಕರಣದ ಕುರಿತು ವಾದ-ಪ್ರತಿವಾದಗಳು ಸಂಜೆ 4 ಗಂಟೆಗೆ ಪ್ರಾರಂಭವಾಗಿ 5 ಗಂಟೆಗೆ ಮುಕ್ತಾಯಗೊಂಡವು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿತು.
ಆರೋಪಿ ಪರ ವಕೀಲರ ವಾದ
ಪರಾರಿಯಾಗಿದ್ದ ರಾಜೀವ್ ಗೌಡ ಪರವಾಗಿ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು ಸುದೀರ್ಘ ವಾದ ಮಂಡಿಸಿದರು. ಈ ಪ್ರಕರಣದಲ್ಲಿ ಬಿಎನ್‌ಎಸ್ 132 ಸೆಕ್ಷನ್ ಅನ್ವಯಿಸಲಾಗಿದ್ದು, ಇದು ಜಾಮೀನು ರಹಿತ ಪ್ರಕರಣವಾಗಿದೆ. ಆದರೆ, ಉಳಿದ ಸೆಕ್ಷನ್‌ಗಳು ಜಾಮೀನು ಸಹಿತವಾಗಿವೆ. ಆರೋಪಿಯು ಸರ್ಕಾರಿ ಅಧಿಕಾರಿಯೊಂದಿಗೆ ದೂರವಾಣಿಯಲ್ಲಿ ಮಾತ್ರ ಮಾತನಾಡಿದ್ದು, ಯಾವುದೇ ದೈಹಿಕ ಹಲ್ಲೆ ಮಾಡಿಲ್ಲ. ಉದ್ದೇಶಪೂರ್ವಕವಾಗಿ ಈ ಸೆಕ್ಷನ್ ಸೇರಿಸಲಾಗಿದೆ ಎಂದು ವಕೀಲರು ಆಕ್ಷೇಪಿಸಿದರು. ದೂರುದಾರರು ನೀಡಿರುವ ದೂರಿನ ಆಧಾರದ ಮೇಲೆ ಈ ಸೆಕ್ಷನ್ ಹಾಕಲಾಗಿದೆ ಎಂದು ಹೇಳಿದ ಅವರು, ಆರೋಪಿಗೆ ಜಾಮೀನು ನೀಡುವಂತೆ ಮನವಿ ಮಾಡಿದರು. ಬಿಎನ್‌ಎಸ್ ಸೆಕ್ಷನ್ 74 ಮತ್ತು 79ರ ಅಡಿಯಲ್ಲಿ ಮಹಿಳೆಗೆ ಅಶ್ಲೀಲ ಪದ ಬಳಕೆ ಮತ್ತು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಇಲ್ಲಿ ನೇರವಾಗಿ ಹಲ್ಲೆ ಮಾಡಿ ಬೆದರಿಕೆ ಹಾಕಿದ ಯಾವುದೇ ಅಂಶವಿಲ್ಲ ಎಂದು ವಿವೇಕ್ ಸುಬ್ಬಾರೆಡ್ಡಿ ವಾದಿಸಿದರು.
ಸರ್ಕಾರಿ ವಕೀಲರ ಪ್ರತಿವಾದ
ಸರ್ಕಾರಿ ಪರ ವಕೀಲ ಮೊಹಮ್ಮದ್ ಖಾಜಾ ಪ್ರತಿವಾದ ಮಂಡಿಸಿ, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಆರೋಪಿಯ ಮೊಬೈಲ್ ಇನ್ನೂ ವಶಪಡಿಸಿಕೊಂಡಿಲ್ಲ. ಕಳೆದ 12 ದಿನಗಳಿಂದ ಅವರು ಹಲವು ಕಡೆ ತಲೆಮರೆಸಿಕೊಂಡಿದ್ದರು. ಆದ್ದರಿಂದ, ಎಲ್ಲಾ ಸಾಕ್ಷ್ಯಗಳನ್ನು ಮಹಜರು ಮಾಡಬೇಕಿದೆ ಎಂದು ವಾದಿಸಿದರು. ಬಿಎನ್‌ಎಸ್ 132 ಸೆಕ್ಷನ್ ಅನ್ವಯಕ್ಕೆ ಕಾರಣವನ್ನು ವಿವರಿಸಿದ ಅವರು, ಆರೋಪಿಯು ಅಷ್ಟು ಕೆಟ್ಟದಾಗಿ ಮಾತನಾಡಿದ್ದಾರೆ. ಅದನ್ನು ಎಲ್ಲರ ಮುಂದೆ ಹೇಳಲು ಸಾಧ್ಯವಿಲ್ಲ, ನೀವೇ ದಾಖಲೆಗಳನ್ನು ಪರಿಶೀಲಿಸಿ ಎಂದು ನ್ಯಾಯಾಧೀಶರಿಗೆ ದಾಖಲೆಗಳನ್ನು ಸಲ್ಲಿಸಿದರು. ಈ ವೇಳೆ, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಮತ್ತೊಮ್ಮೆ ಮನವಿ ಮಾಡಿದರು.
PublicNext
27/01/2026 09:10 pm