ಚಿಕ್ಕಮಗಳೂರು: ಕಾಫಿನಾಡಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಲಾಗಿರುವ 'ಚೈತ್ರೋತ್ಸವ' ಹಾಗೂ ಫಲಪುಷ್ಪ ಪ್ರದರ್ಶನವು ಕೇವಲ ಕಣ್ಣಿಗೆ ಹಬ್ಬವನ್ನಷ್ಟೇ ನೀಡದೆ, ಸಾಮಾಜಿಕ ಜಾಗೃತಿ ಮೂಡಿಸುವ ವೇದಿಕೆಯಾಗಿಯೂ ಗಮನ ಸೆಳೆಯುತ್ತಿದೆ.
ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆಗಾಗಿ ಜಾರಿಗೆ ತರಲಾದ 'ಭದ್ರ ಬಾಲ್ಯ' ಯೋಜನೆಯ ಕುರಿತು ಜನರಲ್ಲಿ ಅರಿವು ಮೂಡಿಸಲು ಹೂವುಗಳಲ್ಲಿ ಸಿದ್ಧಪಡಿಸಿರುವ ಸುಂದರ ಆಕೃತಿಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ.
ರಾಜ್ಯದಲ್ಲೇ ಮೊದಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಈ ವಿಶಿಷ್ಟ ಯೋಜನೆಯ ಹಿಂದೆ ಜಿಲ್ಲಾ ಪಂಚಾಯತ್ ಸಿಇಒ ಕೀರ್ತನಾ ಹಾಗೂ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರ ಅಪಾರ ಪರಿಶ್ರಮವಿದೆ. ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತವಾಗಿಸಲು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಫಲಪುಷ್ಪ ಪ್ರದರ್ಶನದಲ್ಲಿ ಭದ್ರ ಬಾಲ್ಯಕ್ಕೆ ವಿಶೇಷ ಒತ್ತು ನೀಡಲಾಗಿದೆ.
ಬಣ್ಣಬಣ್ಣದ ಹೂವುಗಳಿಂದ ಸಿದ್ಧಗೊಂಡಿರುವ 'ಭದ್ರ ಬಾಲ್ಯ'ದ ಕಲಾಕೃತಿಗಳು ಗಮನ ಸೆಳೆಯುವುದರ ಜೊತೆಗೆ, ಜಿಲ್ಲಾಡಳಿತದ ಈ ಯೋಜನೆಯ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರುತ್ತಿವೆ. ಚೈತ್ರೋತ್ಸವಕ್ಕೆ ಭೇಟಿ ನೀಡುತ್ತಿರುವ ಸಾವಿರಾರು ಜನರು ಈ ಆಕೃತಿಗಳನ್ನು ಕಂಡು ಕ್ರಿಯಾಶೀಲವಾಗಿ ಅರಿವು ಮೂಡಿಸುವ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
PublicNext
28/01/2026 03:52 pm
LOADING...