ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಲನೆಯೇ ಜೀವನ, ಜಡತೆಯೇ ಸಾವು : ತುಮಕೂರು ನೌಕರರಿಗೆ ಜಿಲ್ಲಾಧಿಕಾರಿ ಸ್ಫೂರ್ತಿದಾಯಕ ಸಂದೇಶ

ತುಮಕೂರು

ಚಲನೆಯೇ ಜೀವನ-ಜಡತೆಯೇ ಸಾವು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನುಷ್ಯ ಯಾವಾಗಲೂ ಕ್ರಿಯಾಶೀಲವಾಗಿರಬೇಕು ಎಂದು ನೌಕರರಿಗೆ ಕಿವಿಮಾತು ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತುಮಕೂರು ಜಿಲ್ಲಾ ಘಟಕದ ವತಿಯಿಂದ ಡಾ: ಜಿ. ಪರಮೇಶ್ವರ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ಆಯೋಜಿಸಿದ್ದ 2025-26 ನೇ ಸಾಲಿನ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ” ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ವ್ಯಕ್ತಿ ಕ್ರಿಯಾಶೀಲವಾಗಿದ್ದಲ್ಲಿ ಮಾತ್ರ ಬದುಕಿರುತ್ತಾನೆ ಎಂದ ಅವರು, ಸರ್ಕಾರಿ ನೌಕರರು ದೈಹಿಕವಾಗಿ ಹೆಚ್ಚೆಂದರೆ 10 ಗಂಟೆ ಕೆಲಸ ನಿರ್ವಹಿಸಬಹುದು. ಮಾನಸಿಕವಾಗಿ 4 ಗಂಟೆ ಕೆಲಸ ನಿರ್ವಹಿಸಬಹುದು. ಆದರೂ ಮನೆಗೆ ತೆರಳಿದ ನಂತರ ಇಡೀ ದಿನ ಆದ ಘಟನೆಗಳು ಹಾಗೂ ನಾಳೆ ಆಗಬೇಕಿರುವ ಕೆಲಸಗಳ ಬಗ್ಗೆ ಯೋಚಿಸುತ್ತೇವೆ. ದೈಹಿಕ ಮತ್ತು ಮಾನಸಿಕ ದೃಢತೆ ನೌಕರರಿಗೆ ಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನೌಕರರು ಸದಾ ಕ್ರಿಯಾಶೀಲರಾಗಿರಬೇಕು. ಒಂದಿಲ್ಲೊಂದು ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ನೌಕರರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದರು.

ತುಮಕೂರು ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಜಿಲ್ಲೆಯ ಎಲ್ಲಾ ಹಂತದ ಅಧಿಕಾರಿಗಳು/ ನೌಕರರ ಸಹಕಾರ ಮತ್ತು ಕ್ರಿಯಾಶೀಲತೆಯೇ ಮುಖ್ಯವಾಗಿತ್ತು ಎಂದ ಅವರು, ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ 2ಬಾರಿ ಮುಖ್ಯಮಂತ್ರಿಯವರ ಕಾರ್ಯಕ್ರಮ, 2 ವರ್ಷ ತುಮಕೂರು ದಸರಾ ಉತ್ಸವ, ಕರ್ನಾಟಕ ರಾಜ್ಯ ಒಲಿಂಪಿಕ್ ಕ್ರೀಡಾಕೂಟ ಸೇರಿದಂತೆ ರಾಜ್ಯ ಮಟ್ಟದ ಹಲವಾರು ಕಾರ್ಯಕ್ರಮಗಳನ್ನು ತುಮಕೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿದೆ. ಈ ಎಲ್ಲಾ ಯಶಸ್ಸು ನೌಕರರಿಗೇ ಸೇರಬೇಕು ಎಂದ ಅವರು, ತುಮಕೂರಿನಲ್ಲಿ ನಾಗರಿಕರಿಗೆ ಪೂರಕವಾಗಿ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಹಾಗೂ ಯುವ ಸಮುದಾಯಕ್ಕೆ, ಕ್ರೀಡಾಸಕ್ತರಿಗೆ ಪೂರಕ ಆಟದ ಮೈದಾನಗಳು, ಅಂತಾರಾಷ್ಟ್ರೀಯ ಕ್ರೀಡಾಂಗಣಗಳನ್ನು ನಿರ್ಮಿಸುವ ಮಹತ್ತರ ಯೋಜನೆಗಳು ನಡೆದಿದ್ದು, ಮುಂಬರುವ ದಿನಗಳಲ್ಲಿ ತುಮಕೂರು ರಾಜ್ಯದಲ್ಲಿಯೇ ವಿಶೇಷ ಗಮನ ಸೆಳೆಯುವ ಜಿಲ್ಲೆಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಮಾತನಾಡಿ, ತುಮಕೂರು ಅತಿ ವೇಗದಲ್ಲಿ ಬೆಳೆಯುತ್ತಿರುವ ಜಿಲ್ಲೆಯಾಗಿದ್ದು, ರಾಜಧಾನಿ ಬೆಂಗಳೂರು ನಂತರ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿರುವ ಜಿಲ್ಲೆ ತುಮಕೂರು ಎಂಬುದು ಹೆಮ್ಮೆ ಎಂದರು.

ಯಾವುದೇ ರಾಜಕೀಯ ಪ್ರೇರಿತವಿಲ್ಲದ, ಧರ್ಮಲೇಪಿತವಲ್ಲದ ವೇದಿಕೆಯೆಂದರೆ ಅದು ಕ್ರೀಡಾವೇದಿಕೆ ಎಂದ ಅವರು, ಕ್ರೀಡೆಯಲ್ಲಿ ಸೋಲುಗಳಿಗೆ ವಿಚಲಿತರಾಗುವ ಅಗತ್ಯವಿಲ್ಲ. ಒಂದು ಸೋಲಿನ ನಂತರದ ಗೆಲುವು ಜಯವಷ್ಟೆ, ಎರಡು ಸೋಲಿನ ಬಳಿಕ ಬಂದ ಗೆಲುವು ವಿಜಯ. ಮೂರಕ್ಕಿಂತ ಹೆಚ್ಚು ಬಾರಿ ಸೋತು ಗೆದ್ದರೆ ಅದನ್ನು ದಿಗ್ವಿಜಯ ಎಂದು ನಾವು ಅಥೈಸಿಕೊಳ್ಳಬೇಕು. ಕ್ರೀಡೆ ಸೌಹಾರ್ಧತೆಯ ತೊಟ್ಟಿಲು ಎಂದು ಬಣ್ಣಿಸಿದರು.

ಸರ್ಕಾರಿ ನೌಕರರಿಗೆ ಪೂರಕವಾಗಿ ಸಂಘವು ಸಾಕಷ್ಟು ಪ್ರಗತಿಯ ಮತ್ತು ಆಶಾದಾಯಕ ಕೆಲಸಗಳನ್ನು ಮಾಡಿದೆ ಎಂದ ಅವರು, ಸರ್ಕಾರಿ ನೌಕರರ ಮೇಲೆ ಹಲ್ಲೆ, ನಿಂದನೆಯಂತಹ ಚಟುವಟಿಕೆಗಳಿಗೆ ಸೂಕ್ತ ಕಡಿವಾಣ ಹಾಕಲು ಸಧ್ಯದಲ್ಲಿಯೇ ಸರ್ಕಾರಿ ಆದೇಶವೊಂದು ಹೊರಬೀಳಲಿದೆ. ಅಲ್ಲದೆ, ಸಂಘವು ಈ ಹಿಂದಿನಿAದಲೂ ಸರ್ಕಾರಿ ನೌಕರರ ಒಳಿತಿಗಾಗಿ ಬೇಡಿಕೆಯೊಂದನ್ನು ಸರ್ಕಾರದ ಮುಂದಿಡುತ್ತಾ ಬಂದಿದ್ದು, ಹೊಸ ಪಿಂಚಣಿ ಯೋಜನೆಯನ್ನು ತೆಗೆದು ಹಳೆ ಪಿಂಚಣಿ ಯೋಜನೆಯನ್ನು ಪುನಃ ಜಾರಿಗೆ ತರಬೇಕೆಂಬ ಹೋರಾಟ ಮುಂದುವರೆಯಲಿದೆ. ಈ ವಿಷಯದಲ್ಲಿ ಸರ್ಕಾರದೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ತುಮಕೂರಿನ ರಾಷ್ಟ್ರೀಯ ಖೋ-ಖೋ ಆಟಗಾರ್ತಿ ಚೈತ್ರ ಹಾಗೂ ಸ್ಕೇಟಿಂಗ್ ಆಟಗಾರ್ತಿ ಜಯತೀಕ್ಷ್ಣಇವರನ್ನು ಗೌರವಿಸಲಾಯಿತು. ಅಲ್ಲದೆ, 2024 ಹಾಗೂ 2025 ನೇ ಸಾಲಿನ 22 ಅಧಿಕಾರಿ, ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ತುಮಕೂರು ಜಿಲ್ಲಾ ಘಟಕದ ರಮೇಶ್ ಎಚ್.ಇ., ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ., ಮಧುಗಿರಿ ಶೈಕ್ಷಣಿಕ ಜಿಲ್ಲೆ ನೌಕರರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್. ಪರಮೇಶ್ವರ, ರಾಜ್ಯ ಕ್ರೀಡಾ ಕಾರ್ಯದರ್ಶಿ ಮೋಹನ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

29/01/2026 08:41 am

Cinque Terre

1.88 K

Cinque Terre

0

ಸಂಬಂಧಿತ ಸುದ್ದಿ