ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ 7ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತದ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು, "ಅನಿಶ್ಚಿತತೆ, ವಿಭಜನೆ ಮತ್ತು ಅಶಾಂತಿಯ ಈ ಯುಗದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಜೀವನವು ನೈತಿಕ ದಿಕ್ಕನ್ನು ಸೂಚಿಸುವ ಪ್ರಜ್ವಲಿಸುವ ನಂದಾದೀಪವಾಗಿದೆ" ಎಂದು ಬಣ್ಣಿಸಿದರು. ಶ್ರೀಗಳು ಲಿಂಗೈಕ್ಯರಾಗಿ ಏಳು ವರ್ಷಗಳು ಕಳೆದಿದ್ದರೂ, ಅವರ ಸಾನಿಧ್ಯ ಕಿಂಚಿತ್ತೂ ಕುಂದಿಲ್ಲ, ಬದಲಾಗಿ ಮತ್ತಷ್ಟು ಪ್ರಖರವಾಗಿದೆ ಎಂದು ಅವರು ಶ್ಲಾಘಿಸಿದರು.
19ನೇ ಶತಮಾನದಲ್ಲಿ ಅಟವಿ ಸ್ವಾಮೀಜಿಯವರ ಆದರ್ಶಗಳನ್ನು ಅನುಸರಿಸಿ ಶ್ರೀಮಠವು ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಗಳನ್ನು ಮಾಡುತ್ತಾ ಬಂದಿರುವುದು ಸಂತೋಷದ ವಿಷಯ. ಶ್ರೀ ಶಿವಕುಮಾರ ಸ್ವಾಮೀಜಿಯವರು ಮಠದ ಜವಾಬ್ದಾರಿ ವಹಿಸಿಕೊಂಡ ನಂತರ, ಶ್ರೀಮಠವನ್ನು ಕೇವಲ ಆಧ್ಯಾತ್ಮಿಕ ಕೇಂದ್ರವಾಗಿಸದೆ, ಸಮಾಜಮುಖಿಯಾಗಿ ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಪ್ರಸ್ತುತ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಈ ತ್ರಿವಿಧ ದಾಸೋಹವನ್ನು ಮುಂದುವರಿಸುತ್ತಾ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆ ಎಂದು ಉಪ ರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ಜಾತಿ, ಮತಗಳನ್ನು ಮೀರಿ ತ್ರಿವಿಧ ದಾಸೋಹದಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಸಿದ್ಧಗಂಗಾ ಮಠವು ಐತಿಹಾಸಿಕ ಧಾರ್ಮಿಕ ಕೇಂದ್ರವಾಗಿದೆ ಎಂದು ಹೇಳಿದರು. ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡುವುದೇ ನಮ್ಮ ದೇಶದ ಸಂಸ್ಕೃತಿಯಾಗಿದ್ದು, ಶ್ರೀಮಠದ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಸನ್ನಿವೇಶದಲ್ಲಿ ಅತ್ಯಂತ ಪ್ರಸ್ತುತವಾಗಿದೆ ಎಂದು ಅವರು ಒತ್ತಿ ಹೇಳಿದರು.
ಶ್ರೀ ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಮಾತನಾಡಿ, 89 ವರ್ಷಗಳ ಕಾಲ ಶ್ರೀಮಠದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ತಮ್ಮ ಹಿರಿಯ ಶ್ರೀಗಳು ಸದಾ ಕಾಯಕ ಭಾವನೆ ಜಾಗೃತವಾಗಿರಬೇಕು, ಶ್ರೀಮಠದಲ್ಲಿ ದಾಸೋಹ, ಮಕ್ಕಳ ಶಿಕ್ಷಣ ಎಂದೂ ನಿಲ್ಲಬಾರದು ಎಂದು ವಚನ ನೀಡಿದ್ದರು. ಇಂದಿಗೂ ಅವರು ಲಕ್ಷಾಂತರ ಮಕ್ಕಳಿಗೆ ಮತ್ತು ಭಕ್ತರಿಗೆ ದಾರಿದೀಪವಾಗಿದ್ದಾರೆ ಎಂದು ತಿಳಿಸಿದರು.
ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಮಾತನಾಡಿ, ಅನ್ನ, ಅಕ್ಷರ, ಆಶ್ರಯ ಎಷ್ಟು ಮುಖ್ಯ ಎಂಬುದೇ ಇಂದಿನ ಕಾರ್ಯಕ್ರಮದ ಸಂದೇಶ ಎಂದರು. ಜಾತಿ, ವರ್ಗಗಳನ್ನು ಮೀರಿ ಸಮಾಜದಲ್ಲಿ ಸೇವೆ ಮಾಡುವ ಶ್ರೀಮಠದ ತತ್ವ ಸಿದ್ಧಾಂತವನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆ ಭಾರತದ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಗಣ್ಯರನ್ನು ಸ್ವಾಗತಿಸಿದರು. ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಜಯವಿಭವಸ್ವಾಮಿ ಅವರು ವಂದನಾರ್ಪಣೆ ಮಾಡಿದರು. ವಿ. ಸೋಮಶೇಖರ್ ಕಾರ್ಯಕ್ರಮವನ್ನು ನಿರೂಪಿಸಿದರು.
PublicNext
22/01/2026 01:25 pm