ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು: ಬೈಕ್ ನಲ್ಲಿ ಹೋಗುತ್ತಿದ್ದ ದಂಪತಿ ಮೇಲೆ ಚಿರತೆ ಅಟ್ಯಾಕ್ - ಮಗು ಸೇರಿ ಮೂವರಿಗೆ ಗಂಭೀರ ಗಾಯ

ನಂಜನಗೂಡು: ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿದ್ದು, ಬೈಕ್‌ನಲ್ಲಿ ಜಮೀನಿಗೆ ತೆರಳುತ್ತಿದ್ದ ರೈತ ದಂಪತಿ ಹಾಗೂ ಅವರ ಮಗು ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ವಿವರ

ಚುಂಚನಹಳ್ಳಿ ಗ್ರಾಮದ ರೈತ ನಂಜುಂಡಸ್ವಾಮಿ ಅವರು ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಚುಂಚನಹಳ್ಳಿ-ಕೋಣನೂರು ರಸ್ತೆ ಬಳಿಯ ಜಮೀನಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಏಕಾಏಕಿ ಬೈಕ್‌ಗೆ ಅಡ್ಡಬಂದ ಚಿರತೆಯು ದಾಳಿ ನಡೆಸಿದ ಪರಿಣಾಮ, ಮೂವರೂ ಬೈಕ್‌ನಿಂದ ಕೆಳಗೆ ಬಿದ್ದು ತೀವ್ರ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಗಾಯಗೊಂಡವರನ್ನು ತಗಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಚಿರತೆ ಹಾವಳಿ ಹೆಚ್ಚಳ

ಚುಂಚನಹಳ್ಳಿ, ಕೋಣನೂರು, ಹನುಮನಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆಯ ಕಾಟ ಮಿತಿಮೀರಿದೆ. ಇತ್ತೀಚಿನ ದಿನಗಳಲ್ಲಿ ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದ ಚಿರತೆ, ಇದೀಗ ಜಮೀನುಗಳಿಗೆ ತೆರಳುವ ರೈತರ ಮೇಲೂ ದಾಳಿ ನಡೆಸಲು ಮುಂದಾಗುತ್ತಿದೆ. ಇಂದಿನ ಘಟನೆ ಇದಕ್ಕೆ ತಾಜಾ ಉದಾಹರಣೆಯಾಗಿದೆ.

ರೈತರ ಆಗ್ರಹ

ಈ ಘಟನೆ ಖಂಡಿಸಿರುವ ರೈತ ಕಲ್ಯಾಣ ಸಂಘದ ಪದಾಧಿಕಾರಿಗಳು ಮತ್ತು ರೈತರು, ದಾಳಿ ನಡೆಸಿದ ಚಿರತೆಯನ್ನು ಕೂಡಲೇ ಬೋನು ಇಟ್ಟು ಸೆರೆ ಹಿಡಿಯಬೇಕು ಹಾಗೂ ಗಾಯಗೊಂಡ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ರೈತ ಕಲ್ಯಾಣ ಸಂಘದ ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ಚುಂಚನಹಳ್ಳಿ ಮಲ್ಲೇಶ್ ಮತ್ತು ಮುಖಂಡ ಚುಂಚನಹಳ್ಳಿ ಮಹೇಶ್ ಸೇರಿದಂತೆ ಹಲವು ರೈತರು ಈ ಕುರಿತು ಅರಣ್ಯ ಇಲಾಖೆ ಹಾಗೂ ಸರ್ಕಾರದ ಗಮನ ಸೆಳೆದಿದ್ದಾರೆ.

Edited By : Shivu K
PublicNext

PublicNext

31/01/2026 03:32 pm

Cinque Terre

13.2 K

Cinque Terre

0

ಸಂಬಂಧಿತ ಸುದ್ದಿ