ಭಟ್ಕಳ: ಕಾರ್ಯನಿರತ ಪತ್ರಕರ್ತರ ಧ್ವನಿ (ರಿ), ಬೆಂಗಳೂರು ಇದರ ಭಟ್ಕಳ ತಾಲೂಕು ಘಟಕದ ನೇತೃತ್ವದಲ್ಲಿ ಇಲ್ಲಿನ ನಾಗಯಕ್ಷೆ ಸಭಾಭವನದಲ್ಲಿ ನಡೆದ ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಂಗಾಧರ ನಾಯ್ಕ ಹಾಗೂ ಶ್ರೀಧರ್ ಶೇಟ್ ಅವರಿಗೆ ಕರ್ನಾಟಕ ಸಾಧಕ ಶ್ರೇಷ್ಠ ರತ್ನ ರಾಜ್ಯ ಪ್ರಶಸ್ತಿ ಪ್ರದಾನಿಸಲಾಯಿತು.
ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಗಂಗಾಧರ ನಾಯ್ಕ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಭಟ್ಕಳ ತಾಲೂಕು ಘಟಕದ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಪರಿಷತ್ತಿನ ಚಟುವಟಿಕೆಗಳನ್ನು ತಾಲೂಕಿನ ಮನೆಮನೆಗಳಿಗೆ ತಲುಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಮೂಲಕ ಜಿಲ್ಲೆಯಲ್ಲಿ ಅತ್ಯಧಿಕ ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸಿ ‘ಸಾಹಿತ್ಯ ಸಾರಥ್ಯ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಹಿತಿಯಾಗಿ ‘ಭಾನುಭಾವ’ (ಹನಿಗವಿತೆಗಳ ಸಂಕಲನ) ಹಾಗೂ ಆಚರಣೆ–ರೂಢಿ–ಸಂಪ್ರದಾಯಗಳ ವೈಚಾರಿಕ ಹಿನ್ನೆಲೆಯನ್ನು ಒಳಗೊಂಡ ‘ಆಚಾರ ಸುವಿಚಾರ’ ಕೃತಿಗಳನ್ನು ಪ್ರಕಟಿಸಿದ್ದಾರೆ. ಗಾಯನ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಅವರು ಈಟಿವಿಯ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಹಾಡಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ಪ್ರಶಂಸೆ ಪಡೆದಿದ್ದಾರೆ. ನಿರೂಪಕ, ಉಪನ್ಯಾಸಕ, ಸಂಘಟಕ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಅವರ ಬಹುಮುಖ ಸೇವೆಯನ್ನು ಪರಿಗಣಿಸಿ ಗೌರವಿಸಲಾಗಿದೆ.
ಇನ್ನೋರ್ವ ಪ್ರಶಸ್ತಿ ಪುರಸ್ಕೃತ ಶ್ರೀಧರ್ ಶೇಟ್ ಅವರು ಶಿರಾಲಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಸಾಹಿತಿ, ವ್ಯಂಗ್ಯಚಿತ್ರಕಾರ, ಚಿತ್ರಕಲಾವಿದ ಹಾಗೂ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ಉತ್ತಮ ಶಿಕ್ಷಕರಾಗಿ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಸಲ್ಲಿಸಿದ ಸೇವೆಗೆ 2025ನೇ ಸಾಲಿನ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ ‘ಬೇಲಿಯ ಹೂವು’ ಕವಿತೆಯನ್ನು ಐಸಿಎಸ್‌ಇ ಪಠ್ಯಕ್ರಮದ 5ನೇ ತರಗತಿಯ ‘ಕನ್ನಡ ಚಂದನ’ ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ. ಧ್ವನಿಪೂರ್ಣ ಕವಿಯಾಗಿ ಹೆಸರು ಗಳಿಸಿರುವ ಅವರು ಭಟ್ಕಳ ತಾಲೂಕು 9ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಭಟ್ಕಳ ಘಟಕದ ಅಧ್ಯಕ್ಷ ಶಂಕರ್ ನಾಯ್ಕ, ಕಾರ್ಯದರ್ಶಿ ಉಲ್ಲಾಸ್ ಶಾನಭಾಗ ಹಾಗೂ ಖಜಾಂಚಿ ನಸೀಮುಲ್ಲಾ ಘನಿ ಅವರ ನೇತೃತ್ವದಲ್ಲಿ ಆಯೋಜಿಸಲಾದ ಈ ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 700ಕ್ಕೂ ಹೆಚ್ಚು ಪತ್ರಕರ್ತರು ಭಾಗವಹಿಸಿದ್ದರು.
Kshetra Samachara
01/02/2026 03:32 pm