ನವದೆಹಲಿ: ಗೌಪ್ಯತೆ ಉಲ್ಲಂಘನೆ ಆರೋಪಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್, ವಾಟ್ಸಪ್ ಒಡೆತನದ ಮೆಟಾ (Meta) ಸಂಸ್ಥೆಗೆ ತೀವ್ರ ಎಚ್ಚರಿಕೆ ನೀಡಿದೆ.
"ದೇಶದ ನಿಯಮಗಳನ್ನು ಪಾಲಿಸಲು ಸಾಧ್ಯವಾಗದಿದ್ದರೆ, ದೇಶ ಬಿಟ್ಟು ತೊಲಗಿ" ಎಂದು ಸುಪ್ರೀಂ ಕೋರ್ಟ್ ಖಡಕ್ ಮಾತುಗಳಲ್ಲಿ ತಾಕೀತು ಮಾಡಿದೆ.
ವಾಟ್ಸಪ್ ಮತ್ತು ಡೇಟಾ ಗೌಪ್ಯತೆ ವಿವಾದ
ಮೆಟಾ ಒಡೆತನದ ವಾಟ್ಸಪ್ ಇಂದು ವಿಶ್ವದ ಅತ್ಯಂತ ಜನಪ್ರಿಯ ಮೆಸೆಂಜರ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇಂಟರ್ನೆಟ್ ಮೂಲಕ ವಿಶ್ವದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಲು, ಫೋಟೋ, ವಿಡಿಯೋ, ಧ್ವನಿ ಸಂದೇಶ ಹಾಗೂ ಲೈವ್ ಲೊಕೇಷನ್‌ಗಳನ್ನು ಹಂಚಿಕೊಳ್ಳಲು ಇದು ಅನುಕೂಲ ಕಲ್ಪಿಸುತ್ತದೆ.
ಆದರೆ, ಮೆಟಾ ಸಂಸ್ಥೆಯು ಉದ್ದೇಶಿತ ಜಾಹೀರಾತಿಗಾಗಿ ಬಳಕೆದಾರರ ಖಾಸಗಿ ಡೇಟಾವನ್ನು ಹಂಚಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಸುಪ್ರೀಂ ಕೋರ್ಟ್‌ನ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
213 ಕೋಟಿ ರೂ. ದಂಡ ಎತ್ತಿಹಿಡಿದ ಪೀಠ
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ತ್ರಿಸದಸ್ಯ ಪೀಠವು, ʻವಾಟ್ಸಪ್‌ನ 2021 ರ ಗೌಪ್ಯತೆ ನೀತಿʼಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿತು.
ಈ ಸಂದರ್ಭದಲ್ಲಿ, OTT ಸಂದೇಶ ಪ್ಲಾಟ್‌ಫಾರ್ಮ್‌ನಲ್ಲಿ ಗೌಪ್ಯತೆ ದುರುಪಯೋಗಕ್ಕಾಗಿ ಭಾರತದ ಸ್ಪರ್ಧಾ ಆಯೋಗ (CCI) ವಿಧಿಸಿದ್ದ 213 ಕೋಟಿ ರೂ. ದಂಡವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ನಾಗರಿಕರ ಗೌಪ್ಯತೆಗೆ ಸುಪ್ರೀಂ ಕೋರ್ಟ್ ಆದ್ಯತೆ
ಯಾವುದೇ ಬಹುರಾಷ್ಟ್ರೀಯ ಕಂಪನಿಯ ವ್ಯವಹಾರ ಹಿತಾಸಕ್ತಿಗಳಿಗಾಗಿ ನಾಗರಿಕರ ಗೌಪ್ಯತೆಯ ಹಕ್ಕನ್ನು ರಾಜೀ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ವಿಷಯದ ಕುರಿತು ಫೆಬ್ರವರಿ 10 ರಂದು ವಿವರವಾದ ಆದೇಶಗಳನ್ನು ನೀಡುವುದಾಗಿ ಪೀಠ ತಿಳಿಸಿದೆ.
PublicNext
03/02/2026 03:55 pm