ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಷಾರಾಮಿ ಬದುಕಿನ ಕರಾಳ ಸತ್ಯ - ಸಿ.ಜೆ. ರಾಯ್ ಆರ್ಥಿಕ ಸಂಕಷ್ಟದ ಕಥೆ!

ಬೆಂಗಳೂರು, ಫೆಬ್ರವರಿ 3: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಹಾಗೂ ಖ್ಯಾತ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸ್ಫೋಟಕ ಮಾಹಿತಿಗಳನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಐಷಾರಾಮಿ ಜೀವನಶೈಲಿ, ದುಬಾರಿ ವಾಹನಗಳು ಮತ್ತು ಭವ್ಯ ಬದುಕಿನ ಕಾರಣದಿಂದ ಸಿ.ಜೆ. ರಾಯ್ ಅವರನ್ನು ಹಲವರು 'ಎರಡನೇ ವಿಜಯ್ ಮಲ್ಯ' ಎಂದೇ ಗುರುತಿಸಿದ್ದರು. ಆದರೆ, ಪೊಲೀಸ್ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ವಾಸ್ತವದಲ್ಲಿ ಅವರು ಕಳೆದ ಆರು ತಿಂಗಳಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರು ಎಂಬ ಕಹಿ ಸತ್ಯ ಈಗ ಬಯಲಾಗಿದೆ.

ಪೊಲೀಸ್ ಮೂಲಗಳ ಮಾಹಿತಿ ಅನ್ವಯ, ಸಿ.ಜೆ. ರಾಯ್ ತಮ್ಮ ವ್ಯವಹಾರಗಳಿಗಾಗಿ ಯಾವುದೇ ಬ್ಯಾಂಕ್ ಸಾಲ ಪಡೆದಿರಲಿಲ್ಲ. ಕರ್ನಾಟಕ, ಕೇರಳ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಅವರ ಉದ್ಯಮ ವಿಸ್ತಾರಗೊಂಡಿತ್ತು. ಆದರೆ, ಹೊಸ ಪ್ರಾಜೆಕ್ಟ್‌ಗಳಿಗೆ ಬ್ಯಾಂಕ್ ಹಣದ ಬದಲು ಕೆಲವು ರಾಜಕಾರಣಿಗಳಿಂದ ಹೂಡಿಕೆ ಬಂದಿತ್ತು. ಈ ಹಣದಲ್ಲಿ ಬಹುಪಾಲು ಅಕ್ರಮ ಹಣ (ಬ್ಲ್ಯಾಕ್ ಮನಿ) ಆಗಿರಬಹುದೆಂಬ ಅನುಮಾನ ತನಿಖಾ ಸಂಸ್ಥೆಗಳಿಗೂ ಮೂಡಿತ್ತು ಎನ್ನಲಾಗಿದೆ.

ಆದರೆ, ರಾಯ್ ಕೈಗೊಂಡ ಹೊಸ ಯೋಜನೆಗಳು ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇದರ ಜೊತೆಗೆ, ಬಂದ ಆದಾಯದ ದೊಡ್ಡ ಭಾಗವನ್ನು ಅವರು ತಮ್ಮ ಐಷಾರಾಮಿ ಜೀವನಶೈಲಿಗೆ ವ್ಯಯಿಸುತ್ತಿದ್ದರು. ಪರಿಣಾಮವಾಗಿ, ಅವರು ಹಣಕಾಸು ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಯೋಜನೆಗಳು ನಷ್ಟದತ್ತ ಸಾಗುತ್ತಿದ್ದಂತೆಯೇ, ಹೂಡಿಕೆ ಮಾಡಿದ್ದ ಕೆಲ ರಾಜಕಾರಣಿಗಳು ತಮ್ಮ ಹಣವನ್ನು ವಾಪಸ್ ಕೇಳಲು ಆರಂಭಿಸಿದ್ದರು. ಇದರ ನಡುವೆಯೇ, ಕೇಂದ್ರ ತನಿಖಾ ಸಂಸ್ಥೆಗಳು ಸಿ.ಜೆ. ರಾಯ್ ಅವರ ವ್ಯವಹಾರಗಳತ್ತ ಗಮನ ಹರಿಸಿದ್ದವು. ಬ್ಯಾಂಕ್ ಸಾಲವಿಲ್ಲದೆ ಇಷ್ಟು ದೊಡ್ಡ ಮಟ್ಟದ ವ್ಯವಹಾರಕ್ಕೆ ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆಯೇ ತನಿಖೆಯ ಮೂಲವಾಗಿತ್ತು.

ಒಂದೆಡೆ ಹಣ ಹೂಡಿದವರ ನಿರಂತರ ಒತ್ತಡ, ಮತ್ತೊಂದೆಡೆ ಆದಾಯ ತೆರಿಗೆ ಹಾಗೂ ಇತರೆ ಏಜೆನ್ಸಿಗಳ ಪ್ರಶ್ನೆಗಳು - ಇವೆಲ್ಲಕ್ಕೂ ಸೂಕ್ತ ಉತ್ತರ ನೀಡಲು ಸಾಧ್ಯವಾಗದೆ ಸಿ.ಜೆ. ರಾಯ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

ಆರ್ಥಿಕವಾಗಿ ಸಂಪೂರ್ಣ ಕುಸಿತ ಕಂಡಿದ್ದ ರಾಯ್, ಮಾನಸಿಕವಾಗಿಯೂ ತೀವ್ರವಾಗಿ ಕುಗ್ಗಿಹೋಗಿದ್ದರು. ಕಳೆದ ಕೆಲವು ತಿಂಗಳುಗಳಿಂದ ಅವರು ತೀವ್ರ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು. ತನಿಖೆಯಿಂದ ತಮ್ಮ ವ್ಯವಹಾರಗಳ ಎಲ್ಲಾ ಅಂಶಗಳು ಬಹಿರಂಗವಾಗುತ್ತವೆ ಎಂಬ ಭಯವೂ ಅವರನ್ನು ಕಾಡುತ್ತಿತ್ತು. ಈ ಎಲ್ಲಾ ಒತ್ತಡಗಳು ಒಂದೇ ಸಮಯದಲ್ಲಿ ಎದುರಾದ ಪರಿಣಾಮ, ಅವರು ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಬಂದಿರಬಹುದೆಂದು ಪೊಲೀಸ್ ಮೂಲಗಳು ಶಂಕಿಸಿವೆ.

Edited By : Nagaraj Tulugeri
PublicNext

PublicNext

03/02/2026 09:50 pm

Cinque Terre

25.54 K

Cinque Terre

0

ಸಂಬಂಧಿತ ಸುದ್ದಿ