ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಳಿಅಂಕ ಉಳಿಸಲು ಹೋರಾಟ - ಕೋಳಿಗಳೊಂದಿಗೆ ಡಿಸಿ ಕಚೇರಿಗೆ ಮುತ್ತಿಗೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕೋಳಿ ಅಂಕದ ಮೇಲೆ ಪೊಲೀಸರು ನಡೆಸುತ್ತಿರುವ ದಾಳಿ ಕೋಳಿ ಅಂಕ ಪ್ರಿಯರ ನಿದ್ದೆಗೆಡಿಸಿದೆ. ಈ ಕ್ರಮದಿಂದಾಗಿ ಜಿಲ್ಲೆಯ ಸಾಂಪ್ರದಾಯಿಕ ಆಚರಣೆಗಳಿಗೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿ, ಪೊಲೀಸ್ ಕ್ರಮಗಳ ವಿರುದ್ಧ ಹೋರಾಟ ನಡೆಸಲು 'ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ಸಮಿತಿ' ರಚನೆಯಾಗಿದೆ. ಫೆಬ್ರವರಿ 1ರಂದು ಪುತ್ತೂರಿನಲ್ಲಿ ನಡೆದ ಸಮಿತಿಯ ಮೊದಲ ಸಭೆಯಲ್ಲಿ, ಹಲವು ಹಂತದ ಹೋರಾಟಕ್ಕೆ ಸಿದ್ಧತೆ ನಡೆಸಲಾಗಿದೆ.

ಸಮಿತಿಯ ಹೋರಾಟದ ನಿರ್ಧಾರಗಳು

ತುಳುನಾಡಿನ ವೀರಕ್ರೀಡೆ ಕಂಬಳದಂತೆ, ರೈತಾಪಿ ವರ್ಗದ ಮತ್ತೊಂದು ಮನೋರಂಜನಾ ಕ್ರೀಡೆಯಾಗಿರುವ ಕೋಳಿ ಅಂಕಕ್ಕೆ 'ಜೂಜು' ಹಣೆಪಟ್ಟಿ ಕಟ್ಟಿ ನಿರ್ಬಂಧ ಹೇರಲಾಗಿದೆ ಎಂದು ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಧಾರ್ಮಿಕ ಹಿನ್ನೆಲೆಯಲ್ಲಿ, ಜೂಜುರಹಿತ ಕೋಳಿಅಂಕಕ್ಕೆ ಅವಕಾಶ ನೀಡುವಂತೆ ಶಾಸಕರ ನೇತೃತ್ವದಲ್ಲಿ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಹೋರಾಟದ ಭಾಗವಾಗಿ, ಕೋಳಿಗಳ ಜೊತೆಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು, ಹಾಗೂ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲು ಸಮಿತಿ ನಿರ್ಧರಿಸಿದೆ.

ಕೋಳಿಅಂಕದ ಸಾಂಪ್ರದಾಯಿಕ ಹಿನ್ನೆಲೆ

ಪ್ರಾಚೀನ ಸಂಪ್ರದಾಯದಂತೆ, ನೇಮೋತ್ಸವಗಳ ಸಂದರ್ಭದಲ್ಲಿ ಈ ಸಾಂಪ್ರದಾಯಿಕ ಕೋಳಿಅಂಕವನ್ನು ನಡೆಸಲಾಗುತ್ತಿತ್ತು. ನೇಮೋತ್ಸವದ 'ಗೊನೆಮುಹೂರ್ತ'ದ ನಂತರ 'ಕೋಳಿಗೂಟ' ನೆಡುವ ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕೆಲವು ಕಡೆಗಳಲ್ಲಿ ನೇಮೋತ್ಸವದ ಮುಂಚಿತವಾಗಿ ಕೋಳಿಅಂಕ ನಡೆದರೆ, ಇನ್ನು ಕೆಲವು ಭಾಗಗಳಲ್ಲಿ ನೇಮೋತ್ಸವದ ಬಳಿಕ ನಡೆಯುತ್ತದೆ. ಧಾರ್ಮಿಕ ಹಿನ್ನಲೆಯಲ್ಲಿ ಕೋಳಿಅಂಕದ ಮೂಲಕ 'ಗಣಗಳಿಗೆ ರಕ್ತತರ್ಪಣ' ನೀಡುವ ನಂಬಿಕೆ ರೂಢಿಯಲ್ಲಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ

ಆದರೆ, ಇದೀಗ ಪೊಲೀಸರು ಜಿಲ್ಲೆಯಲ್ಲಿ ಕೋಳಿಅಂಕ ನಡೆಸಲು ಅವಕಾಶ ನಿರಾಕರಿಸುತ್ತಿದ್ದಾರೆ. ಧಾರ್ಮಿಕ ತಾಣಗಳಲ್ಲಿಯೂ ಜೂಜುರಹಿತ ಕೋಳಿಅಂಕಕ್ಕೆ ನಿರ್ಬಂಧ ಹೇರುವ ಕೆಲಸ ಮಾಡಲಾಗಿದೆ. ದೈವಾರಾಧನೆ, ಯಕ್ಷಗಾನ, ನಾಗಮಂಡಲ, ನವರಾತ್ರಿ ಆಚರಣೆ, ತೆಂಗಿನಕಾಯಿ ಕುಟ್ಟುವುದು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಆಚರಣೆಯಾದ ಕೋಳಿಅಂಕವನ್ನು ತನ್ನದೇ ಆದ ಚೌಕಟ್ಟಿನಲ್ಲಿ ನಡೆಸಲಾಗುತ್ತಿತ್ತು. ಈ ಧಾರ್ಮಿಕ ಪರಂಪರೆಯ ಕೋಳಿಅಂಕಕ್ಕೆ ನಿಷೇಧ ಹೇರುವ ಮೂಲಕ ನಾಡಿನ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಸಮಿತಿ ಆರೋಪಿಸಿದೆ. ಸಮಿತಿಯ ಸದಸ್ಯರಾದ ಮನ್ಮಥ ಶೆಟ್ಟಿ ಮತ್ತು ಶಿವಣ್ಣ ಗೌಡ ಇಡ್ಯಾಡಿ ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Edited By : Vinayak Patil
Kshetra Samachara

Kshetra Samachara

03/02/2026 05:24 pm

Cinque Terre

1.63 K

Cinque Terre

0

ಸಂಬಂಧಿತ ಸುದ್ದಿ