ಮಂಗಳೂರು: ತುಳುನಾಡಿನ ಸಂಸ್ಕೃತಿಯನ್ನು ಜಗತ್ತಿನಲ್ಲಿ ಗುರುತಿಸುವಂತೆ ಮಾಡಿದ ಕಂಬಳಕ್ಕೂ ಚಿನ್ನದ ದರ ಏರಿಕೆಯ ಚಾಟಿ ಬೀಸಿದೆ
ಚಿನ್ನದ ದರ ನಾಗಲೋಟದಂತೆ ಏರಿಕೆಯಾಗುತ್ತಿದೆ. ದರ ಏರಿಕೆಯ ನೇರ ಪರಿಣಾಮ ಕಂಬಳ ಕೂಟದ ಮೇಲೂ ಆಗುತ್ತಿದ್ದು, ಕಂಬಳ ಸಂಘಟಕರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಸದ್ಯ ಚಿನ್ನದ ಬೆಲೆ ಇಳಿಕೆಯ ಲಕ್ಷಣ ಕಾಣಿಸುತ್ತಿಲ್ಲ. ಭವಿಷ್ಯದಲ್ಲಿ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆಯಿದ್ದು, ಆದ್ದರಿಂದ ಸಂಘಟಕರಿಗೆ ಕಂಬಳ ಓಟದ ಬಹುಮಾನವಾಗಿ ನೀಡುವ ಚಿನ್ನದ ಹೊರೆ ಅಧಿಕವಾಗಿದೆ.
ಈ ಬಗ್ಗೆ ಕಂಬಳ ಸಮಿತಿಯ ಅಧ್ಯಕ್ಷ ಐಕಳಬಾವಾ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕಂಬಳಕ್ಕೂ ಚಿನ್ನಕ್ಕೂ ಅವಿನಾಭಾವ ಸಂಬಂಧವಿದೆ. ಕಂಬಳದ ಕೋಣಗಳ ಯಜಮಾನರು ಕೋಣಗಳನ್ನು ಲಕ್ಷಾಂತರ ರೂ. ಖರ್ಚು ಮಾಡಿ ಮಕ್ಕಳಂತೆ ಸಾಕುತ್ತಾರೆ. ಆದ್ದರಿಂದ ಕಂಬಳ ಕೂಟದಲ್ಲಿ ತಮಗೆ ಚಿನ್ನದ ಪದಕ ದೊರಕಬೇಕೆನ್ನುವುದೇ ಅವರ ಗುರಿ. ಆದ್ದರಿಂದ ಎಷ್ಟೇ ಕಷ್ಟವಾದರೂ ಚಿನ್ನದ ಪದಕ ಕೊಡುವುದು ನಮ್ಮ ಕರ್ತವ್ಯ. ಕಂಬಳ ಓಟದ ಎಲ್ಲಾ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ ಕೋಣಕ್ಕೆ 1ಪವನ್ ಚಿನ್ನ ದ್ವಿತೀಯ ಸ್ಥಾನ ಪಡೆದ ಕೋಣಗಳಿಗೆ 1/2 ಪವನ್ ಚಿನ್ನವನ್ನು ಬಹುಮಾನವಾಗಿ ನೀಡಿಯೇ ನೀಡಲಾಗುತ್ತದೆ. ಅದನ್ನು ಮುಂದುವರಿಸಿಕೊಂಡು ಹೋಗಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ ಎಂದರು.
ಇದರೊಂದಿಗೆ ಸರಕಾರಕ್ಕೆ ಮನವಿ ಮಾಡುವುದೇನೆಂದರೆ ಬಜೆಟ್‌ನಲ್ಲಿ ಕಂಬಳಕ್ಕೆ ಐದು ಕೋಟಿ ರೂ. ಅನುದಾನವನ್ನು ಮೀಸಲಿಡಬೇಕು. ಒಂದು ಕಂಬಳ ಮಾಡಲು 40-50 ಲಕ್ಷ ರೂ. ತಗುಲುತ್ತದೆ. ಇದರೊಂದಿಗೆ ಇದೀಗ ಚಿನ್ನದ ಹೊರೆಯೂ ಅಧಿಕವಾಗುತ್ತಿದೆ. ಇದೀಗ ಕಂಬಳದ ಆರ್ಥಿಕ ಹೊರೆ ತಗ್ಗಿಸಲು ಐಪಿಎಲ್ ಮಾದರಿಯಲ್ಲಿ ಕರಾವಳಿ ಸೇರಿದಂತೆ ಬೆಂಗಳೂರು, ದುಬೈ, ಮುಂಬೈಯ ಉದ್ಯಮಿಗಳನ್ನು ಮೆಗಾ ಸ್ಪಾನ್ಸರ್‌ಗಳಾಗಿ ಬಳಸಿಕೊಳ್ಳುವ ಚಿಂತನೆಯಲ್ಲಿದ್ದೇವೆ. ಮುಂದಿನ ವರ್ಷದಿಂದಲೇ ಅದನ್ನು ಕಾರ್ಯಗತಗೊಳಿಸಲು ತಯಾರಿ ನಡೆಸಿದ್ದೇವೆ ಎಂದರು.
PublicNext
03/02/2026 08:42 am