ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ - ಬಿಜೆಪಿಗೆ ದಿಢೀರ್ ಶಾಕ್

ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿಯ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ, ತಂದೆಯ ಅನಾರೋಗ್ಯದ ಕಾರಣ ನೀಡಿ ಪಕ್ಷ ವಹಿಸಿದ್ದ ಚುನಾವಣಾ ಜವಾಬ್ದಾರಿಗೆ ರಾಜೀನಾಮೆ ನೀಡಿದ್ದು, ಈ ನಿರ್ಧಾರ ಪಕ್ಷದ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಬಿಜೆಪಿಯ ಜನಪ್ರಿಯತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಣ್ಣಾಮಲೈ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆರು ಕ್ಷೇತ್ರಗಳ ಉಸ್ತುವಾರಿಯನ್ನಾಗಿ ನೇಮಕಗೊಂಡಿದ್ದರು. ಆದರೆ, ವೈಯಕ್ತಿಕ ಕಾರಣದಿಂದಾಗಿ ಈ ಜವಾಬ್ದಾರಿಯನ್ನು ಹೊರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಅಣ್ಣಾಮಲೈ ಅವರ ರಾಜೀನಾಮೆಗೆ ತಂದೆಯ ಅನಾರೋಗ್ಯವನ್ನು ಮುಖ್ಯ ಕಾರಣವಾಗಿ ನೀಡಿದ್ದರೂ, ಅವರನ್ನು ಕೇವಲ ಆರು ವಿಧಾನಸಭಾ ಕ್ಷೇತ್ರಗಳಿಗೆ ಸೀಮಿತಗೊಳಿಸಿದ್ದು ಅವರ ಅಸಮಾಧಾನಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಕೊಯಂಬತ್ತೂರಿನಲ್ಲಿರುವ ತಮ್ಮ ತಂದೆಯ ಆರೋಗ್ಯ ಸರಿಯಿಲ್ಲ, ಅವರನ್ನು ನೋಡಿಕೊಳ್ಳಲು ಓಡಾಡಲು ಕಷ್ಟವಾಗುತ್ತದೆ ಎಂಬ ಕಾರಣವನ್ನು ಅಣ್ಣಾಮಲೈ ನೀಡಿದ್ದಾರೆ. ಆದರೆ, ಈ ರಾಜೀನಾಮೆ ಪಕ್ಷದ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡ ನಂತರ, ಅಣ್ಣಾಮಲೈ ಅವರನ್ನು ಕ್ರಮೇಣ ಸೈಡ್‌ಲೈನ್ ಮಾಡಲಾಗುತ್ತಿದೆ ಎಂಬ ಮಾತು ಬಿಜೆಪಿ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ. ಎಡಪ್ಪಾಡಿ ಪಳನಿಸ್ವಾಮಿಯವರ ಒತ್ತಡದಿಂದಾಗಿ ಅವರು ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನದಿಂದ ಪದತ್ಯಾಗ ಮಾಡುವಂತಾಗಿತ್ತು ಎಂದು ಮೂಲಗಳು ತಿಳಿಸಿವೆ. ಅವರ ಸ್ಥಾನಕ್ಕೆ ನೈನಾರ್ ರಾಜೇಂದ್ರನ್ ಅವರನ್ನು ನೇಮಿಸಲಾಗಿತ್ತು. ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರ ಫೇವರಿಟ್ ನಾಯಕರಲ್ಲಿ ಅಣ್ಣಾಮಲೈ ಒಬ್ಬರು ಎಂಬ ಮಾತು ತಮಿಳುನಾಡು ಬಿಜೆಪಿಯಲ್ಲಿ ಪ್ರಚಲಿತದಲ್ಲಿತ್ತು.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮಿಳುನಾಡಿನಲ್ಲಿ ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ಅಣ್ಣಾಮಲೈ ಕೇಂದ್ರಬಿಂದುವಾಗಿದ್ದರು. ತಮಿಳುನಾಡು ಬಿಜೆಪಿಯ ಅತ್ಯಂತ ಜನಪ್ರಿಯ ನಾಯಕರಲ್ಲಿ ಅವರು ಮುಂಚೂಣಿಯಲ್ಲಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕಳೆದ ವಾರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನೈನಾರ್ ರಾಜೇಂದ್ರನ್ ಅವರು, ಕರೈಕುಡಿ, ಸಿಂಗನಲ್ಲೂರು, ಶ್ರೀವೈಕುಂಠಂ, ವಿರುಗಂಬಕ್ಕಂ, ಮಧುರೈ (ದಕ್ಷಿಣ) ಮತ್ತು ಪದ್ಮನಾಭಪುರಂ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿಯಾಗಿ ಅಣ್ಣಾಮಲೈ ಅವರನ್ನು ನೇಮಿಸಿದ್ದರು. ಈ ಸೀಮಿತ ಜವಾಬ್ದಾರಿಯೇ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಹೇಳಲಾಗುತ್ತಿದೆ.

ತಮ್ಮ ರಾಜೀನಾಮೆಯ ಕುರಿತು ಪ್ರತಿಕ್ರಿಯಿಸಿರುವ ಅಣ್ಣಾಮಲೈ, "ನನ್ನ ತಂದೆ ಅನಾರೋಗ್ಯ ಪೀಡಿತರಾಗಿದ್ದಾರೆ, ಅವರನ್ನು ನೋಡಿಕೊಳ್ಳುವುದು ನನ್ನ ಮೊದಲ ಆದ್ಯತೆ. ಈ ಕಾರಣದಿಂದಾಗಿ, ನಾನು ಪ್ರಚಾರಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ನೀವು ನನ್ನನ್ನು ಕೊಯಂಬತ್ತೂರಿನಲ್ಲಿ ಹೆಚ್ಚಾಗಿ ನೋಡುತ್ತಿದ್ದೀರಿ" ಎಂದು ಹೇಳಿದ್ದಾರೆ.

ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಮತ್ತು ಮೈತ್ರಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಅಣ್ಣಾಮಲೈ ಸಜ್ಜಾಗಿದ್ದರು. ಆದರೆ, ಅವರು ಇದ್ದಕ್ಕಿದ್ದಂತೆ ಉಸ್ತುವಾರಿ ಸ್ಥಾನದಿಂದ ಹಿಂದಕ್ಕೆ ಸರಿದಿರುವುದು ತಮಿಳುನಾಡು ಬಿಜೆಪಿ ಘಟಕಕ್ಕೆ ದೊಡ್ಡ ಪ್ರಶ್ನೆಯಾಗಿದೆ. ಅಣ್ಣಾಮಲೈ ಬಿಜೆಪಿಯ ಜನಪ್ರಿಯ ಯುವ ನಾಯಕರಾಗಿದ್ದರು. ಅವರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಕೇಂದ್ರದ ನಾಯಕರಿಗೆ ತಿಳಿದಿಲ್ಲ ಎಂದು ಕೆಲವು ಹಿರಿಯ ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ, ಅಣ್ಣಾಮಲೈ ಅವರು ಸಿಂಗನಲ್ಲೂರು ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

Edited By : Nagaraj Tulugeri
PublicNext

PublicNext

03/02/2026 08:36 pm

Cinque Terre

19.59 K

Cinque Terre

1

ಸಂಬಂಧಿತ ಸುದ್ದಿ