ತಲ್ಲೂರು: ಬದುಕು ಎಲ್ಲಿಗೆ ಕರೆಯುತ್ತದೆಯೋ ಅಲ್ಲಿಗೆ ಹೋಗಿ ಬೆವರು ಸುರಿಸಿ ದುಡಿಯುವವರೇ ನಿಜವಾದ ಶ್ರಮಜೀವಿಗಳು. ಕುಂದಾಪುರದ ತಲ್ಲೂರಿನ ರಸ್ತೆ ಬದಿಯಲ್ಲಿ, ಸಣ್ಣ ಗುಡಿಸಲುಗಳಲ್ಲಿ ಕುಳಿತು ಮಕ್ಕಳ ಆಟದ ಬ್ಯಾಟ್‌ಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವವರೂ ಅಂತಹವರೇ. ಅವರು ನಮ್ಮೂರಿನವರಲ್ಲದಿರಬಹುದು, ಆದರೆ ಅವರ ಕಾಯಕನಿಷ್ಠೆ ಮತ್ತು ಶ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ದೂರದೂರಿನಿಂದ ಬಂದ ಅತಿಥಿ ಕಾರ್ಮಿಕರ 'ಕೈಚಳಕ'
ತಮ್ಮ ನಾಡು, ನುಡಿ ಮತ್ತು ಕುಟುಂಬವನ್ನು ದೂರ ಬಿಟ್ಟು, ಬೆಳಣಿಕೆ ಸಂಸಾರದೊಂದಿಗೆ ಕೇವಲ ಕಾಯಕವನ್ನೇ ನಂಬಿ ತಲ್ಲೂರಿಗೆ ಬಂದಿರುವ ಈ ಶ್ರಮಜೀವಿಗಳು ತಯಾರಿಸುವ ಮರದ ಕ್ರಿಕೆಟ್ ಬ್ಯಾಟ್‌ಗಳು ಇಂದು ಎಲ್ಲರ ಗಮನ ಸೆಳೆಯುತ್ತಿವೆ. ಹೊಟ್ಟೆಪಾಡಿಗಾಗಿ ಮರವನ್ನು ಕತ್ತರಿಸಿ, ಅದಕ್ಕೆ ಸುಂದರ ರೂಪ ನೀಡಿ ಮಕ್ಕಳ ಕೈಗೆ ಆಟದ ಸಾಮಗ್ರಿ ನೀಡುವ ಇವರ ಶ್ರಮಕ್ಕೆ ಬೆಲೆ ಕಟ್ಟಲಾಗದು.
ಹೊರಗಿನಿಂದ ಬಂದು ನಮ್ಮೂರಿನಲ್ಲಿ ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿಯುವವರಿಗೆ ಆಸರೆಯಾಗುವುದು ನಮ್ಮ ಧರ್ಮ. ಅಪ್ಪಟ ಹಸ್ತಕಲೆ, ಆಧುನಿಕ ಯಂತ್ರಗಳಿಲ್ಲದೆ, ಕೇವಲ ಕೈಯಿಂದಲೇ ಅಚ್ಚುಕಟ್ಟಾದ ಬ್ಯಾಟ್‌ಗಳನ್ನು ತಯಾರಿಸುವ ಇವರ ಕಲೆ ಅದ್ಭುತ.
ಕಡಿಮೆ ದರ, ಉತ್ತಮ ಗುಣಮಟ್ಟ: ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಆಟಿಕೆಗಳಿಗಿಂತ ಇವರು ತಯಾರಿಸುವ ಬ್ಯಾಟ್‌ಗಳು ಹೆಚ್ಚು ಬಾಳಿಕೆ ಬರುತ್ತವೆ ಮತ್ತು ಬೆಲೆಯೂ ಕೈಗೆಟುಕುವಂತಿದೆ.
ಊರು ಯಾವುದಾದರೇನು? ಕಾಯಕದ ಹಾದಿ ಒಂದೇ. ತಲ್ಲೂರಿನ ರಸ್ತೆ ಬದಿಯಲ್ಲಿ ಮಾರಾಟಕ್ಕಿರುವ ಈ ಸುಂದರ ಬ್ಯಾಟ್‌ಗಳನ್ನು ನಾವು ಖರೀದಿಸುವುದರಿಂದ ಆ ಶ್ರಮಜೀವಿಗಳ ಸಂಸಾರಕ್ಕೆ ದೊಡ್ಡ ನೆರವಾಗುತ್ತದೆ.
ನಮ್ಮೂರಿನ ಜನತೆ ಎಂದಿಗೂ ಕಷ್ಟ ಪಡುವವರ ಕೈಬಿಡುವುದಿಲ್ಲ ಎಂಬ ನಂಬಿಕೆ ಇವರಲ್ಲೂ ಮೂಡಲಿ."ದುಡಿಮೆಗೆ ಊರು ಕೇರಿಯ ಹಂಗಿಲ್ಲ. ಹೊರಗಿನಿಂದ ಬಂದರೂ ನಮ್ಮೂರಿನ ಜನರ ಮನಗೆಲ್ಲುತ್ತಿರುವ ಈ ಶ್ರಮಜೀವಿಗಳ ಬೆವರಿನ ಹನಿಗೆ ಬೆಲೆ ನೀಡೋಣ." ಎನ್ನುವುದೇ ಪಬ್ಲಿಕ್ ನೆಕ್ಸ್ಟ್ ಆಶಯ..!
PublicNext
04/02/2026 09:05 am