ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ವಿರುದ್ಧ 'ದೇಶದ್ರೋಹಿ' ಆರೋಪ, 'ಪಾಕ್ ನಾಲಿಗೆ' ತಿರುಗೇಟು: ಪರಿಷತ್‌ನಲ್ಲಿ ಬಿರುಗಾಳಿ!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕುರಿತು ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ ನೀಡಿದ ಹೇಳಿಕೆ ಮತ್ತು ಅದನ್ನು ಟೀಕಿಸುವ ಭರದಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ಬಳಸಿದ ವಿವಾದಾತ್ಮಕ ಪದಗಳು ವಿಧಾನ ಪರಿಷತ್‌ನಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ಗದ್ದಲ, ಕೋಲಾಹಲಕ್ಕೆ ಕಾರಣವಾಗಿ, ಭಾರಿ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿತು.

ಪ್ರಧಾನಿ ವಿರುದ್ಧ 'ದೇಶದ್ರೋಹಿ' ಹೇಳಿಕೆ

ಮಂಗಳವಾರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ (ಫೆ.2) ಕೇಂದ್ರ ಸರ್ಕಾರದ ಧೋರಣೆಗಳ ಬಗ್ಗೆ ಪ್ರಸ್ತಾಪಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಸೀರ್ ಅಹ್ಮದ್, 'ಪ್ರಧಾನಿ ಮೋದಿ ದೇಶದ್ರೋಹಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು, ನಸೀರ್ ಅಹ್ಮದ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಗಿತ್ತು.

ಸಿ.ಟಿ. ರವಿ 'ಪಾಕಿಸ್ತಾನದ ನಾಲಿಗೆ' ಟೀಕೆ

ಮಂಗಳವಾರ ಬೆಳಗ್ಗೆ ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆಯೇ, ಪ್ರತಿಪಕ್ಷದ ಸದಸ್ಯರು ಮತ್ತೆ ಸದನದ ಬಾವಿಗಿಳಿದು ಧರಣಿ ಮುಂದುವರೆಸಿದರು. ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಸಿ.ಟಿ. ರವಿ, "ಸಾಂವಿಧಾನಿಕ ಹುದ್ದೆಯಲ್ಲಿರುವ ದೇಶದ ಪ್ರಧಾನಿ ಮೋದಿಯವರಿಗೆ ಬಳಸಿದ ಮಾತು ಈ ದೇಶದ ನಾಲಿಗೆ ಆಗಿರಲು ಸಾಧ್ಯವಿಲ್ಲ. ಇದು ಯಾವುದೋ ಪಾಕಿಸ್ತಾನದ ನಾಲಿಗೆ ಆಗಿರಬೇಕು. ಆ ನಾಲಿಗೆ ಯಾವುದೆಂದು ಪತ್ತೆ ಹಚ್ಚಿ" ಎಂದು ತೀವ್ರ ವಾಗ್ದಾಳಿ ನಡೆಸಿದರು. ಇತರೆ ಬಿಜೆಪಿ ಸದಸ್ಯರು ಇದಕ್ಕೆ ಧ್ವನಿಗೂಡಿಸಿ, ನಸೀರ್ ಅಹ್ಮದ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಪರಸ್ಪರ ದೂರು, ಸದನ ಮುಂದೂಡಿಕೆ

ಸಭಾಪತಿ ಬಸವರಾಜ ಹೊರಟ್ಟಿ ಅವರು ಮಧ್ಯಪ್ರವೇಶಿಸಿ, ಪ್ರಧಾನಿಗೆ 'ದೇಶದ್ರೋಹಿ' ಎಂದಿದ್ದಕ್ಕೆ ಸದನದ ಬೇಷರತ್ ಕ್ಷಮೆ ಕೇಳುವಂತೆ ನಸೀರ್ ಅಹ್ಮದ್‌ಗೆ ಸೂಚಿಸಿದರು. ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರು ಸಿ.ಟಿ. ರವಿ ಬಳಸಿದ 'ಪಾಕಿಸ್ತಾನದ ನಾಲಿಗೆ' ಪದಬಳಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಖಂಡಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ನಸೀರ್ ಅಹ್ಮದ್, "ಸಿ.ಟಿ. ರವಿ 'ಪಾಕಿಸ್ತಾನದ ನಾಲಿಗೆ' ಎಂದು ಹೇಳುತ್ತಾರೆ. ಮೊದಲು ಅವರನ್ನು ಸದನದಿಂದ ಹೊರಹಾಕಿ" ಎಂದು ಆಗ್ರಹಿಸಿದರು. ಆಗ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, "ರಾಜ್ಯಪಾಲರ ಬಗ್ಗೆ ಹಗುರವಾಗಿ ಮಾತನಾಡಿದ್ದಾಯ್ತು, ಇದೀಗ ಪ್ರಧಾನಿ ಬಗ್ಗೆ ನಿಂದಿಸುತ್ತಿದ್ದಾರೆ. ಹೀಗಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಸದನದಿಂದ ಹೊರಹಾಕಬೇಕು" ಎಂದು ಒತ್ತಾಯಿಸಿದರು. ಗದ್ದಲ ಹೆಚ್ಚಾಗುತ್ತಿದ್ದಂತೆ ಸಭಾಪತಿಗಳು ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಿದರು.

'ನಾವು ಭಾರತೀಯರು, ಪಾಕಿಸ್ತಾನದವರಲ್ಲ'

ಒಂದು ಗಂಟೆಯ ನಂತರ ಸದನ ಆರಂಭವಾದಾಗಲೂ, ನಸೀರ್ ಅಹ್ಮದ್ ಕ್ಷಮೆಯಾಚನೆಗೆ ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದರು. ಈ ವೇಳೆ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, "ಸಿ.ಟಿ. ರವಿ ಅವರು ನಮ್ಮ ಸದಸ್ಯರ ಕುರಿತು 'ಪಾಕಿಸ್ತಾನದ ನಾಲಿಗೆ' ಎಂದು ಹೀಯಾಳಿಸಿದ್ದಾರೆ. ಇವರು ಪದೇ ಪದೇ ಯಾಕೆ ನಮಗೆ ಪಾಕಿಸ್ತಾನದ ಹೆಸರು ಹೇಳುತ್ತಾರೆ? ನಾವು ಭಾರತ ದೇಶದವರು. ಇಲ್ಲೇ ಹುಟ್ಟಿ, ಇಲ್ಲೇ ಸಾಯುತ್ತೇವೆ. ನಾವು ಭಾರತದ ದೇಶಭಕ್ತರು. ಈ ದೇಶದ ಹಕ್ಕು, ಗೌರವ ನಮಗೂ ಇದೆ. ಕೂಡಲೇ ಸಿ.ಟಿ. ರವಿ ಹೇಳಿಕೆ ಖಂಡಿಸಿ, ಅವರ ವಿರುದ್ಧ ಕ್ರಮ ಆಗಬೇಕೆಂದು ಸಭಾಪತಿಯವರಿಗೆ ದೂರು ನೀಡಿದ್ದೇವೆ" ಎಂದರು.

ಕ್ಷಮೆ ಕೇಳಲು ಸಿ.ಟಿ. ರವಿ ನಿರಾಕರಣೆ

ಆಗ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, "ದೂರಿಗೆ ಪ್ರತಿದೂರು ಆಗಬಾರದು. ಮೊದಲು ನಸೀರ್ ಅಹ್ಮದ್ ಅವರು ಕ್ಷಮೆಯಾಚಿಸಬೇಕು. ನಮ್ಮ ಸದಸ್ಯರು ನೇರವಾಗಿ ಯಾರ ಬಗ್ಗೆಯೂ ಮಾತನಾಡಿಲ್ಲ" ಎಂದು ಸ್ಪಷ್ಟಪಡಿಸಿದರು. "ತಮ್ಮ ಹೇಳಿಕೆಯಲ್ಲಿ ಯಾರ ಹೆಸರನ್ನು ಉಲ್ಲೇಖಿಸಿಲ್ಲ. ಹೀಗಾಗಿ ಕ್ಷಮೆಯಾಚಿಸುವುದಿಲ್ಲ" ಎಂದು ಸಿ.ಟಿ. ರವಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಈ ವೇಳೆ ಉಭಯ ಪಕ್ಷಗಳ ನಡುವೆ ಮಾತಿನ ಜಟಾಪಟಿ ಮುಂದುವರೆಯಿತು.

ವಿಷಾದ vs ಕ್ಷಮೆ: ನಸೀರ್ ಅಹ್ಮದ್ ಪ್ರತಿಕ್ರಿಯೆ

ನಂತರ ಸಭಾಪತಿ ಹೊರಟ್ಟಿ ಅವರು ನಸೀರ್ ಅಹ್ಮದ್ ಹಾಗೂ ಸಿ.ಟಿ. ರವಿ ಇಬ್ಬರೂ ವಿಷಾದ ವ್ಯಕ್ತಪಡಿಸುವಂತೆ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಸೀರ್ ಅಹ್ಮದ್, "ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಾಡಿರುವ ಅನ್ಯಾಯವನ್ನು ಖಂಡಿಸುವ ಭರದಲ್ಲಿ ಪ್ರಧಾನಿ ಮೋದಿ ಅವರನ್ನು 'ದ್ರೋಹಿ' ಎಂದು ಕರೆದಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ" ಎಂದು ಹೇಳಿದರು. ತಕ್ಷಣವೇ ಪ್ರತಿಪಕ್ಷ ಸದಸ್ಯರು "ವಿಷಾದ ಬೇಡ. ಕ್ಷಮೆ ಎನ್ನಬೇಕು" ಎಂದು ಆಗ್ರಹಿಸಿದರು. ಇದರಿಂದ ಸಿಟ್ಟಾದ ಸಭಾಪತಿ, "ವಿಷಾದವೆಂದರೆ ಕ್ಷಮೆ ಎಂದರ್ಥವಲ್ಲವೇ?" ಎಂದು ಪ್ರಶ್ನಿಸಿ, ಸಿ.ಟಿ. ರವಿಗೆ ವಿಷಾದ ವ್ಯಕ್ತಪಡಿಸುವಂತೆ ಹೇಳಿದರು.

ಸಿ.ಟಿ. ರವಿ ಮತ್ತೆ ಕ್ಷಮೆ ನಿರಾಕರಣೆ, ಕಲಾಪ ಮುಂದೂಡಿಕೆ

ಆದರೆ, ಸಿ.ಟಿ. ರವಿ, "ದೂರು ಕೊಟ್ಟವರನ್ನು, ಆಪಾದಿತನನ್ನು ಒಂದೇ ತಕ್ಕಡಿಗೆ ಹಾಕುತ್ತೀರಾ? ಎಂದರೆ ನಿಮ್ಮ ಮಾತಿಗೆ ನಾನು ಬದ್ಧ. ಭಾರತೀಯ ನಾಲಿಗೆ ಈ ರೀತಿ ಮಾತನಾಡಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದೇನೆ. ನಾಲಿಗೆ ಯಾರದ್ದು ಎಂದು ಪತ್ತೆ ಹಚ್ಚಿ ಎಂದು ಪೀಠಕ್ಕೆ ನಾನು ಮನವಿ ಮಾಡಿದ್ದೇನೆ ಅಷ್ಟೇ. ಹೀಗಾಗಿ ಕ್ಷಮೆಯಾಚಿಸಲಾರೆ" ಎಂದು ಪುನರುಚ್ಚರಿಸಿದರು. ಇದರಿಂದ ಪರಸ್ಪರ ವಾಗ್ವಾದ, ಆರೋಪ-ಪ್ರತ್ಯಾರೋಪ ಹೆಚ್ಚಾಗುತ್ತಿದ್ದಂತೆ ಸದನವನ್ನು ಮತ್ತೆ ಮುಂದೂಡಲಾಯಿತು.

Edited By : Vijay Kumar
PublicNext

PublicNext

04/02/2026 12:17 pm

Cinque Terre

3 K

Cinque Terre

0

ಸಂಬಂಧಿತ ಸುದ್ದಿ