ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ರೊಚ್ಚಿಗೆದ್ದು, ತಮ್ಮ ಪಕ್ಷದ ಶಾಸಕರನ್ನು ಉದ್ದೇಶಿಸಿ, "ಏಳ್ರಿ ಎಲ್ಲ... ಎದ್ದು ಗಲಾಟೆ ಮಾಡ್ರಿ... ಏಯ್ ರಾಯರಡ್ಡಿ ಯಾಕೆ ಕೂತಿದ್ದೀಯಾ ಏಳು...." ಎಂದು ಆದೇಶಿಸುವ ಮೂಲಕ ಸದನದಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿದರು. ವಿಬಿ ಜಿ ರಾಮ್ ಜಿ ವಿರುದ್ಧ ನಿರ್ಣಯ ಮಂಡಿಸುವ ವೇಳೆ ವಿರೋಧ ಪಕ್ಷಗಳು ಪದೇ ಪದೇ ಅಡ್ಡಿಪಡಿಸಿದ್ದರಿಂದ ಸಿಎಂ ಸಿದ್ದರಾಮಯ್ಯ ಸಿಟ್ಟಿಗೆದ್ದಿದ್ದರು.
ಅಬಕಾರಿ ಇಲಾಖೆ ಭ್ರಷ್ಟಾಚಾರದ ಕುರಿತ ಚರ್ಚೆ ಆರಂಭವಾಗುವ ವೇಳೆ ಸದನದಿಂದ ಹೊರ ಹೋಗಿದ್ದ ಸಿಎಂ ಸಿದ್ದರಾಮಯ್ಯ, ವಾಪಸ್ ಬಂದಾಗಲೂ ಸಚಿವ ಆರ್. ಅಶೋಕ ಅವರ ಮಾತು ಮುಂದುವರಿದಿತ್ತು. ಇದು ಅವರ ಸಿಟ್ಟಿಗೆ ಮತ್ತಷ್ಟು ಕಾರಣವಾಯಿತು. ಬಳಿಕ, ಜೆಡಿಎಸ್‌ನ ಸಮೃದ್ಧಿ ಮಂಜುನಾಥ್ ಅವರಿಗೆ ಮಾತನಾಡಲು ಸಭಾಧ್ಯಕ್ಷರು ಅವಕಾಶ ನೀಡಲು ಮುಂದಾದಾಗ, ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. "ನಿಮ್ಮ ಚೇಂಬರ್‌ನಲ್ಲಿ ಹೇಳಿದ್ದೇನು? ಕಲಾಪ ಅಜೆಂಡಾ ಪ್ರಕಾರ ನಡೆಯಬೇಕು. ನರೇಗಾ ಬಗ್ಗೆ ಚರ್ಚೆ ಆಗಲಿ ಎಂದೇ ಸದನವನ್ನು ಮೂರು ದಿನಗಳ ಕಾಲ ವಿಸ್ತರಣೆ ಮಾಡಿದ್ದು? ಆಗ ಅಶೋಕ, ಸುನಿಲ್ ಅವರೂ ಇದ್ದರಲ್ವಾ?" ಎಂದು ಪ್ರಶ್ನಿಸಿ ಸಿಡಿಮಿಡಿಗೊಂಡರು.
ಸಿದ್ದರಾಮಯ್ಯ ಅವರ ಮಾತುಗಳಿಗೆ ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ವಿ. ಸುನಿಲ್‌ಕುಮಾರ್, "ನಾವು ನರೇಗಾ ಬಗ್ಗೆ ಚರ್ಚೆಗೆ ಸಿದ್ಧರಿದ್ದೇವೆ. ಆದರೆ ಅಬಕಾರಿ ಇಲಾಖೆ ಭ್ರಷ್ಟಾಚಾರದ ಕುರಿತು ಚರ್ಚೆ ನಡೆಸಲು ನೀವು ಸಿದ್ಧರಿಲ್ಲ. ನರೇಗಾದಲ್ಲಿ ಲೂಟಿ ಹೊಡೆಯಲು ಆಗುವುದಿಲ್ಲ ಎಂಬುದೇ ನಿಮ್ಮ ಸಂಕಟ. ರಾತ್ರಿ 12 ಗಂಟೆಯವರೆಗೂ ಚರ್ಚೆಗೆ ನಾವು ಸಿದ್ಧರಿದ್ದೇವೆ. ತಾಳ್ಮೆ ಕಳೆದುಕೊಳ್ಳಬೇಡಿ" ಎಂದು ತಿರುಗೇಟು ನೀಡಿದರು.
ನಿರ್ಣಯ ಓದುವಾಗ ಬಿಜೆಪಿ ಸದಸ್ಯರು ಪದೇ ಪದೇ ಅಡ್ಡಿಪಡಿಸಿದ್ದರಿಂದ, "ಮಾತು ಕೇಳದವರನ್ನು ಹೊರಗೆ ಹಾಕ್ರಿ" ಎಂದು ಸಿದ್ದರಾಮಯ್ಯ ಗುಡುಗಿದರು. ಬಿಜೆಪಿ-ಜೆಡಿಎಸ್ ಸದಸ್ಯರ ಘೋಷಣೆಗಳು ಮತ್ತಷ್ಟು ಹೆಚ್ಚಾದಾಗ, ಸಿಎಂ ತಾಳ್ಮೆ ಕಳೆದುಕೊಂಡು, "ಇನ್ನು ನೀವು (ಸಭಾಧ್ಯಕ್ಷರು) ಕರೆದರೆ ನಾವು ಸಭೆಗೆ ಬರುವುದಿಲ್ಲ. ಸಭೆಯಲ್ಲಿ ಬಿಜೆಪಿ ನಾಯಕರು ಕೊಟ್ಟ ಮಾತೇನು? ಒಂದು ಗಂಟೆ ಮಾತಾಡುತ್ತೇವೆ ಎಂದು ಅಶೋಕನೇ ಎರಡು ಗಂಟೆ ಮಾತಾಡಿದ್ದಾರೆ. ಅವರಿಗೆ (ಬಿಜೆಪಿ) ಮಾನ ಮರ್ಯಾದೆ ಇಲ್ಲ" ಎಂದು ಕಿಡಿಕಾರಿದರು. ಇದೇ ವೇಳೆ, ಅರವಿಂದ ಬೆಲ್ಲದ ಅವರು ನರೇಗಾದಲ್ಲಿ ನಡೆದ ಭ್ರಷ್ಟಾಚಾರದ ಕುರಿತು ಸಿಎಜಿ ವರದಿಯನ್ನು ಗಟ್ಟಿಯಾಗಿ ಓದಿದರು. ವಿರೋಧ ಪಕ್ಷಗಳ ಸದಸ್ಯರು ಒಂದೇ ಸಮನೆ ಧಿಕ್ಕಾರ ಕೂಗುತ್ತಿದ್ದರು.
ಸದನದಲ್ಲಿ ಗದ್ದಲ ಮಿತಿಮೀರಿ, ವಿರೋಧ ಪಕ್ಷಗಳ ಸದಸ್ಯರು ಕೂಗಾಟ ಮುಂದುವರಿಸಿದ್ದಾಗಲೂ, ತಮ್ಮ ಪಕ್ಷದ ಸದಸ್ಯರು ಸುಮ್ಮನೆ ಕುಳಿತಿದ್ದನ್ನು ಕಂಡ ಸಿದ್ದರಾಮಯ್ಯ ಅವರ ತಾಳ್ಮೆ ಕಟ್ಟೆ ಒಡೆದು. ಎಲ್ಲರತ್ತ ಕೈ ಮಾಡಿ, "ಏಳ್ರಿ ಗಲಾಟೆ ಮಾಡ್ರಿ... ನಿಮಗೆ ಮಾತ್ರ ಅಲ್ಲ, ನಮಗೂ ಗಲಾಟೆ ಮಾಡಲು ಬರಲ್ವಾ" ಎಂದು ಏರಿದ ಧ್ವನಿಯಲ್ಲಿ ಹೇಳಿದರು.
ತಕ್ಷಣವೇ ಕಾಂಗ್ರೆಸ್‌ನ ಎಲ್ಲ ಸದಸ್ಯರೂ ಎದ್ದು ನಿಂತು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಲಾರಂಭಿಸಿದರು. ಸ್ವತಃ ಸಿದ್ದರಾಮಯ್ಯ ಅವರೂ ಮುಷ್ಟಿ ಕಟ್ಟಿ ಕೈ ಮೇಲೆತ್ತಿ ಬಿಜೆಪಿ ವಿರುದ್ಧ ಘೋಷಣೆ ಮೊಳಗಿಸಿದರು. ವಿರೋಧ ಪಕ್ಷಗಳ ಸದಸ್ಯರು 'ಕಾಂಗ್ರೆಸ್ ಲೂಟಿ ಲೂಟಿ' ಎಂದು ಕೂಗಿದರೆ, ಆಡಳಿತ ಪಕ್ಷದ ಸದಸ್ಯರು 'ಬಿಜೆಪಿ ಲೂಟಿ ಲೂಟಿ' ಎಂದು ಪ್ರತಿಕ್ರಿಯಿಸಿ ಘೋಷಣೆ ಕೂಗಿದರು.
PublicNext
04/02/2026 02:22 pm