ನವದೆಹಲಿ : ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಸುಳ್ಳು ಮತ್ತು ವಂಚನೆಯ ಮೂಲಕ ದೇಶದ ದಿಕ್ಕು ತಪ್ಪಿಸುತ್ತಿದ್ದಾರೆ, ಕಾಂಗ್ರೆಸ್ ಆಡಳಿತದಲ್ಲಿ ಆರ್ಥಿಕತೆ ನಾಶವಾಗಿತ್ತು ಎಂದು ಆರೋಪ ಮಾಡಿದ್ದಾರೆ.
ಹೌದು ಸಚಿವ ಪಿಯೂಷ್ ಗೋಯಲ್ ಅವರು ರಾಹುಲ್ ಗಾಂಧಿ ಅವರ ನಕಾರಾತ್ಮಕ ಮನಸ್ಥಿತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ರಾಹುಲ್ ಗಾಂಧಿಯಂತಹ ನಾಯಕರು ದೇಶದಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಿರುವುದು ದೇಶದ ದೌರ್ಭಾಗ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಆಡಳಿತಾವಧಿಯ ಬಗ್ಗೆ ಟೀಕಿಸಿದ ಗೋಯಲ್, "ಯುಪಿಎ ಸರ್ಕಾರದ ಹತ್ತು ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ದೇಶದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳಿತು. ಅಭಿವೃದ್ಧಿ ಕುಂಠಿತಗೊಳಿಸಿ ಜನರಿಗೆ ತೊಂದರೆ ನೀಡಿತು" ಎಂದು ಸ್ಪಷ್ಟಪಡಿಸಿದರು.
ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗುವುದನ್ನು ನೋಡಲು ರಾಹುಲ್ ಗಾಂಧಿಗೆ ಆಸಕ್ತಿಯಿಲ್ಲ ಎಂದು ಸಚಿವರು ಆರೋಪಿಸಿ, ರಾಹುಲ್ ಗಾಂಧಿಯವರ ಸುಳ್ಳುಗಳು ಮತ್ತು ಕುತಂತ್ರಗಳು ದೇಶದ ಜನರ ಮುಂದೆ ನಡೆಯುವುದಿಲ್ಲ ಎಂದು ಗುಡುಗಿದರು.
ಎಷ್ಟೇ ಅಡೆತಡೆಗಳು ಎದುರಾದರೂ ಭಾರತವು ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಗೋಯಲ್ ವಿಶ್ವಾಸ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದ ಆರ್ಥಿಕತೆ ಮತ್ತಷ್ಟು ಸದೃಢವಾಗುತ್ತಿದೆ ಎಂದು ಪ್ರತಿಪಾದಿಸಿದರು.
ಈ ಕುರಿತು ಮತ್ತಷ್ಟು ಮಾತನಾಡಿದ ಪಿಯೂಷ್ ಗೋಯಲ್, "ರಾಹುಲ್ ಗಾಂಧಿಯವರು ಜನರನ್ನು ದಾರಿತಪ್ಪಿಸಲು ನೋಡುತ್ತಿದ್ದಾರೆ, ಆದರೆ ದೇಶದ ಜನರಿಗೆ ಸತ್ಯ ಏನೆಂದು ತಿಳಿದಿದೆ. ಅವರ ಸುಳ್ಳಿನ ರಾಜಕೀಯ ಇನ್ನು ಮುಂದೆ ನಡೆಯದು" ಎಂದು ಸ್ಪಷ್ಟಪಡಿಸಿದರು.
PublicNext
04/02/2026 12:31 pm