ಲಕ್ನೋ (ಉತ್ತರ ಪ್ರದೇಶ): ಮೂಕಪ್ರಾಣಿಯ ತಾಯ್ತನದ ಮಮತೆ ಮತ್ತು ಅಗಲಿಕೆಯ ನೋವಿನ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. ತನ್ನ ಮೃತಪಟ್ಟ ಮರಿಯನ್ನು ಅಗಲಲಾರದೆ ಒದ್ದಾಡುತ್ತಿದ್ದ ತಾಯಿ ಕೋತಿಗೆ ಉತ್ತರ ಪ್ರದೇಶದ ಪೊಲೀಸರು ಸಾಂತ್ವನ ಹೇಳಿ ರಕ್ಷಿಸಿದ ಮಾನವೀಯ ಘಟನೆ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಹೌದು ಯಾವುದೋ ಕಾರಣದಿಂದ ಕೋತಿಯ ಮರಿ ಸಾವನ್ನಪ್ಪಿತ್ತು. ಆದರೆ ಆ ತಾಯಿ ಕೋತಿ ಮರಿಯ ಶವವನ್ನು ಬಿಟ್ಟು ಕದಲಲು ನಿರಾಕರಿಸಿ ಮರಿಯನ್ನು ಎದೆಯ ಮೇಲೆ ಹಾಕಿಕೊಂಡು ಬಿಕ್ಕಳಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಈ ಹೃದಯವಿದ್ರಾವಕ ದೃಶ್ಯವನ್ನು ಗಮನಿಸಿದ ಉತ್ತರ ಪ್ರದೇಶದ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ತಾಯಿ ಕೋತಿಯನ್ನು ಸಮಾಧಾನಪಡಿಸಿ, ಮೃತ ಮರಿಯನ್ನು ಅದರಿಂದ ಬೇರ್ಪಡಿಸಿ ನಂತರ ಮರಿಗೆ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದಾರೆ.
ಲಾಠಿ ಹಿಡಿಯುವ ಕೈಗಳು ಪ್ರಾಣಿಯ ನೋವಿಗೆ ಸ್ಪಂದಿಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಾಯಿ ಕೋತಿಗೆ ಆಹಾರ ನೀಡಿ ಅದರ ಹಸಿವು ಮತ್ತು ದುಃಖವನ್ನು ನೀಗಿಸಲು ಪ್ರಯತ್ನಿಸುವ ಮೂಲಕ ತಮ್ಮ ಮಾನವೀಯ ಮುಖವನ್ನು ಅನಾವರಣಗೊಳಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, "ತಾಯಿಯ ಪ್ರೀತಿ ಮನುಷ್ಯರಿಗಿರಲಿ ಅಥವಾ ಪ್ರಾಣಿಗಳಿಗಿರಲಿ, ಅದು ಅಜರಾಮರ" ಎಂದು ಜನ ಕಾಮೆಂಟ್ ಮಾಡುತ್ತಿದ್ದಾರೆ. ಪೊಲೀಸರ ಈ ಅನುಕಂಪದ ಕೆಲಸಕ್ಕೆ ದೇಶಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸರು ಕೇವಲ ಕಾನೂನು ರಕ್ಷಕರಲ್ಲ, ಅವರು ಜೀವರಕ್ಷಕರು ಕೂಡ ಹೌದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
PublicNext
04/02/2026 04:57 pm
LOADING...