ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕ್ರಮ ವಲಸಿಗರನ್ನು ತೋರಿಸಿದ್ರೂ ಕೇಸ್ ಹಾಕ್ತೀರಲ್ಲ? ಪೊಲೀಸರಿಗೆ ಹೈಕೋರ್ಟ್ ತರಾಟೆ - ಪುನೀತ್ ಕೆರೆಹಳ್ಳಿಗೆ ರಿಲೀಫ್

ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ವಿಚಾರವಾಗಿ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿದ್ದ ಎರಡು ಪ್ರಕರಣಗಳಲ್ಲಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಪುನೀತ್ ಕೆರೆಹಳ್ಳಿ ವಿರುದ್ಧದ ಒಂದು ಪ್ರಕರಣಕ್ಕೆ ತಡೆ ನೀಡಿದ್ದು, ಮತ್ತೊಂದು ಪ್ರಕರಣದಲ್ಲಿ ಬಲವಂತದ ಕ್ರಮಕೈಗೊಳ್ಳದಂತೆ ನಿರ್ಬಂಧ ವಿಧಿಸಿದೆ. ಈ ಮೂಲಕ ಹಿಂದೂ ಕಾರ್ಯಕರ್ತನಿಗೆ ತಾತ್ಕಾಲಿಕ ರಿಲೀಫ್ ದೊರೆತಿದೆ.

ಹೈಕೋರ್ಟ್ ಏಕಸದಸ್ಯ ಪೀಠ ಇಂದು ಪ್ರಕರಣದ ವಿಚಾರಣೆ ನಡೆಸಿತು. "ಎಲ್ಲೆಡೆ ಅಕ್ರಮ ವಲಸಿಗರು ಬಂದು ಸೇರಿದ್ದಾರೆ. ಅಕ್ರಮ ವಲಸಿಗರು ಇರುವುದನ್ನು ತೋರಿಸಿದರೂ ಅವರ ವಿರುದ್ಧ ಕೇಸ್ ಹಾಕುತ್ತೀರಿ. ಹಾಗಾದರೆ, ಈ ವಲಸಿಗರ ವಿರುದ್ಧ ನೀವು ಯಾವ ಕ್ರಮ ಕೈಗೊಂಡಿದ್ದೀರಿ?" ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡು ಸರ್ಕಾರವನ್ನು ಪ್ರಶ್ನಿಸಿತು. ಸರ್ಕಾರದ ಪ್ರತಿಕ್ರಿಯೆಗಾಗಿ ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ, ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್. ಬಿಂಗೀಪುರ ಗ್ರಾಮದಲ್ಲಿ ಶಂಕಿತ ಬಾಂಗ್ಲಾ ವಲಸಿಗರು ನೆಲೆಸಿದ್ದ ಸ್ಥಳಕ್ಕೆ ಪುನೀತ್ ಕೆರೆಹಳ್ಳಿ ತಂಡ ಭೇಟಿ ನೀಡಿತ್ತು. ಅಲ್ಲಿನ ವಲಸೆ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಿ ಪೊಲೀಸರಿಗೆ ಒಪ್ಪಿಸಲಾಗಿತ್ತು. ನಂತರ, ಜಾಗದ ಮಾಲೀಕ ಸಿದ್ದೇಶ್ ಅವರು ಪುನೀತ್ ಕೆರೆಹಳ್ಳಿ, ಡಾ. ನಾಗೇಂದ್ರಪ್ಪ ಸೇರಿದಂತೆ ಇತರರ ವಿರುದ್ಧ ಬೆದರಿಕೆ ಆರೋಪದ ಮೇಲೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ, ಬನ್ನೇರುಘಟ್ಟ ಪೊಲೀಸರು ತಡರಾತ್ರಿ ಪುನೀತ್ ಕೆರೆಹಳ್ಳಿಯವರನ್ನು ಬಂಧಿಸಿದ್ದರು. ಅವರ ಬಂಧನ ಖಂಡಿಸಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಕೆರೆಹಳ್ಳಿ ಷರತ್ತುಬದ್ಧ ಜಾಮೀನು ಪಡೆದಿದ್ದರು. ಇದೀಗ ಇದೇ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.

ಮತ್ತೊಂದು ಪ್ರಕರಣ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಅಕ್ರಮ ಬಾಂಗ್ಲಾದೇಶಿ ವಲಸಿಗರ ಪತ್ತೆ ಕಾರ್ಯಾಚರಣೆಗೆ ಮುಂದಾದಾಗ ಪುನೀತ್ ಕೆರೆಹಳ್ಳಿಯವರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

ಇದೇ ವೇಳೆ, ಕೋಗಿಲು ಬಡಾವಣೆಯಲ್ಲಿ ಅಕ್ರಮ ವಸತಿಗಳ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪುನರ್ವಸತಿ ಮತ್ತು ಪರಿಹಾರ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯೂ ನಡೆಯಿತು. ಅರ್ಜಿಯಲ್ಲಿ 7 ಜನರಿಗೆ ನಿವೇಶನ ಮಂಜೂರಾದ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆದರೆ, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಹೈಕೋರ್ಟ್‌ಗೆ ಮಾಹಿತಿ ನೀಡಿ, "ಅವರಲ್ಲಿ ನಾಲ್ವರಿಗೆ ನಿವೇಶನ ಮಂಜೂರಾದ ದಾಖಲೆಗಳಿಲ್ಲ, ಮೂವರಿಗೆ ವಿವಾದಿತ ಜಾಗದಲ್ಲಿ ನಿವೇಶನ ಮಂಜೂರಾಗಿಲ್ಲ ಹಾಗೂ ಪುನರ್ವಸತಿ ಕೇಂದ್ರಗಳಿಗೆ ಜನರು ಬರುತ್ತಿಲ್ಲ" ಎಂದರು. ಪ್ರಕರಣದಲ್ಲಿ ಬಿ.ವಿ. ವಿದ್ಯುಲ್ಲತಾ ಅವರನ್ನು ಅಮಿಕಸ್ ಕ್ಯೂರಿಯಾಗಿ (ನ್ಯಾಯಾಲಯದ ಮಿತ್ರ) ನೇಮಿಸಿದ ಹೈಕೋರ್ಟ್, ಪುನರ್ವಸತಿ ಕುರಿತು ವರದಿ ನೀಡಲು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.

Edited By : Nagaraj Tulugeri
PublicNext

PublicNext

04/02/2026 06:48 pm

Cinque Terre

5.93 K

Cinque Terre

0

ಸಂಬಂಧಿತ ಸುದ್ದಿ