ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

40,000 ಕೋಟಿ ರೂ. ವಂಚನೆ : ಅನಿಲ್ ಅಂಬಾನಿ ವಿರುದ್ಧ SIT ರಚನೆಗೆ ಸುಪ್ರೀಂ ಕೋರ್ಟ್ ಆದೇಶ

ಹೊಸದಿಲ್ಲಿ : ರಿಲಯನ್ಸ್ ಕಮ್ಯುನಿಕೇಷನ್ಸ್ (RCOM) ಹಾಗೂ ಅದರ ಅಂಗಸಂಸ್ಥೆಗಳು ಮತ್ತು ಉದ್ಯಮಿ ಅನಿಲ್ ಅಂಬಾನಿ ವಿರುದ್ಧ ಕೇಳಿಬಂದಿರುವ 40,000 ಕೋಟಿ ರೂ.ಗಳ ಬೃಹತ್ ಬ್ಯಾಂಕ್ ವಂಚನೆ ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಜಾರಿ ನಿರ್ದೇಶನಾಲಯಕ್ಕೆ (ED) ಸೂಚಿಸಿದೆ. ಅಲ್ಲದೆ, ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಅನಿಲ್ ಅಂಬಾನಿ ದೇಶ ತೊರೆಯಬಾರದು ಎಂದು ಸ್ಪಷ್ಟಪಡಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಪಂಚೋಲಿ ಅವರ ಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ. ಹಿರಿಯ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿಯನ್ನು ಕೂಡಲೇ ರಚಿಸಿ, ಈವರೆಗಿನ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ನ್ಯಾಯಾಲಯ ನಿರ್ದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಅನಿಲ್ ಅಂಬಾನಿ ದೇಶ ತೊರೆಯುವ ಸಾಧ್ಯತೆಯ ಕುರಿತು ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ, ಅವರ ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ ನ್ಯಾಯಾಲಯಕ್ಕೆ ಭರವಸೆ ನೀಡಿದರು. "ಅವರು ಭಾರತದಲ್ಲಿಯೇ ಇದ್ದಾರೆ ಮತ್ತು ಈ ನ್ಯಾಯಾಲಯದ ಅನುಮತಿಯಿಲ್ಲದೆ ದೇಶ ತೊರೆಯುವುದಿಲ್ಲ" ಎಂದು ರೋಹಟ್ಗಿ ಸ್ಪಷ್ಟಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ದಿಲ್ಲಿ ಹೈಕೋರ್ಟ್‌ನಲ್ಲೂ ಇದೇ ರೀತಿಯ ಭರವಸೆಯನ್ನು ನೀಡಲಾಗಿತ್ತು, ಆದರೂ ಅವರು ದೇಶ ತೊರೆದಿದ್ದರು" ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ರೋಹಟ್ಗಿ, "ಆದರೆ, ಅವರು ಹಿಂತಿರುಗಿ 5,000 ಕೋಟಿ ರೂ. ಪಾವತಿಸಿದ್ದಾರೆ" ಎಂದು ಸಮರ್ಥಿಸಿಕೊಂಡರು.

ತನಿಖೆಗೆ ಯಾವುದೇ ಅಡ್ಡಿಯಾಗದಂತೆ ಎಲ್ಲಾ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬ ಸಾಲಿಸಿಟರ್ ಜನರಲ್ ಅವರ ಭರವಸೆ ಮತ್ತು ನ್ಯಾಯಾಲಯದ ಅನುಮತಿಯಿಲ್ಲದೆ ಅಂಬಾನಿ ದೇಶ ತೊರೆಯುವುದಿಲ್ಲ ಎಂಬ ಅವರ ವಕೀಲರ ಭರವಸೆಯನ್ನು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ದಾಖಲಿಸಿದೆ.

ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗುಂಪಿನ ವ್ಯವಹಾರಗಳ ತನಿಖೆಗೆ ಎಸ್‌ಐಟಿ ರಚಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದುವರಿಸಿದೆ. ಈ ತನಿಖೆಗಳು 2002ರ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಮತ್ತು 1999ರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಕಾನೂನುಬದ್ಧವಾಗಿ ನಡೆಯುತ್ತಿವೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ನಾವು ಪ್ರಸ್ತುತ ಗಮನಿಸುತ್ತಿರುವ ನಿಜವಾದ ವಂಚನೆಯ ಮೊತ್ತ 40,000 ಕೋಟಿ ರೂ. ಆಗಿದೆ" ಎಂದು ಬಹಿರಂಗಪಡಿಸಿದರು. ಇದಕ್ಕೆ ಪ್ರತಿಯಾಗಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, "ಈಗ ಪ್ರತ್ಯೇಕ ಎಫ್‌ಐಆರ್ ದಾಖಲಿಸಲು ಬಯಸುತ್ತೀರಾ? ಇವು ದೂರುಗಳಲ್ಲವೇ? ಇದು ಪ್ರತ್ಯೇಕ ಅಪರಾಧವಲ್ಲವೇ?" ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಮೆಹ್ತಾ, "ಮೊದಲಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವತಿಯಿಂದ ಎಫ್‌ಐಆರ್ ದಾಖಲಾಗಿತ್ತು. ನಂತರ ಇತರ ಬ್ಯಾಂಕ್‌ಗಳಿಗೆ ಈ ವಂಚನೆ ಕುರಿತು ಮಾಹಿತಿ ನೀಡಲಾಗಿದೆ" ಎಂದು ಸ್ಪಷ್ಟಪಡಿಸಿದರು.

Edited By : Nirmala Aralikatti
PublicNext

PublicNext

04/02/2026 06:26 pm

Cinque Terre

2.18 K

Cinque Terre

0

ಸಂಬಂಧಿತ ಸುದ್ದಿ