ಬೆಂಗಳೂರು: ಅಮೆರಿಕ ಮತ್ತು ಭಾರತದ ನಡುವೆ ಮಹತ್ವದ ವಾಣಿಜ್ಯ ಒಪ್ಪಂದ ಏರ್ಪಟ್ಟಿದ್ದು, ಭಾರತೀಯ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ 25 ರಿಂದ ಶೇ 18ಕ್ಕೆ ಇಳಿಕೆ ಮಾಡಲಾಗಿದೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, "ಭಾರತದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಈಗ ಶೇ 18ರಷ್ಟು ಕಡಿಮೆ ಸುಂಕ ವಿಧಿಸಲಾಗುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಈ ಅದ್ಭುತ ಘೋಷಣೆಗಾಗಿ ಭಾರತದ 1.4 ಶತಕೋಟಿ ಜನರ ಪರವಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು" ಎಂದು ಹೇಳಿದ್ದಾರೆ.
ಈ ಮಹತ್ವದ ವಾಣಿಜ್ಯ ಒಪ್ಪಂದದ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕದ ಖ್ಯಾತ ಉದ್ಯಮಿ ಮೋಹನ್‌ದಾಸ್ ಪೈ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು "ವಿಶಿಷ್ಟ ವ್ಯಕ್ತಿ" ಎಂದು ಬಣ್ಣಿಸಿದ್ದಾರೆ. ಸುದ್ದಿಸಂಸ್ಥೆಯೊಂದಕ್ಕೆ ಮಾತನಾಡಿದ ಅವರು, "ಟ್ರಂಪ್ ಯಾರ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ. ಅವರಿಗೆ ಏನು ಬೇಕೋ ಅದನ್ನೇ ಮಾಡುತ್ತಾರೆ, ತಮ್ಮ ಇಚ್ಛೆಯಂತೆ ಸುಂಕಗಳನ್ನು ಹೆಚ್ಚಿಸುತ್ತಾರೆ. ಅವರೊಂದಿಗೆ ಹೋರಾಡುವುದು ಸುಲಭವಲ್ಲ" ಎಂದು ತಿಳಿಸಿದ್ದಾರೆ. ಪೈ ಅವರ ಪ್ರಕಾರ, ಟ್ರಂಪ್ ಈ ಹಿಂದೆ "ನೀವು ರಷ್ಯಾದ ತೈಲವನ್ನು ಖರೀದಿಸದಿರುವುದರಿಂದ ನಾನು ಸುಂಕವನ್ನು ಶೇ.18% ಕ್ಕೆ ಇಳಿಸುತ್ತಿದ್ದೇನೆ" ಎಂದು ಹೇಳಿದ್ದರು. ಆದರೆ, ಪ್ರಧಾನಿ ಮೋದಿ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಪೈ ವಿಶ್ವಾಸ ವ್ಯಕ್ತಪಡಿಸಿದರು.
"ನಾವು ಅಮೆರಿಕದೊಂದಿಗಿನ ಈ ಒಪ್ಪಂದವನ್ನು ಒಂದು ಅನುಕೂಲಕರ ಅವಕಾಶವಾಗಿ ಪರಿಗಣಿಸಬೇಕು. ಅಮೆರಿಕದೊಂದಿಗೆ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ಮೂಲಕ ಚೀನಾ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತವೂ ಈ ಅವಕಾಶವನ್ನು ಬಳಸಿಕೊಂಡು ಅಮೆರಿಕಕ್ಕೆ ಹೆಚ್ಚಿನ ರಫ್ತು ಮಾಡಬೇಕು ಮತ್ತು ವ್ಯಾಪಾರವನ್ನು ವಿಸ್ತರಿಸಬೇಕು" ಎಂದು ಮೋಹನ್‌ದಾಸ್ ಪೈ ಸಲಹೆ ನೀಡಿದರು.
ಅಮೆರಿಕ ಮತ್ತು ಭಾರತ ಎರಡೂ ದೇಶಗಳು ಸಮಗ್ರ ಮತ್ತು ಔಪಚಾರಿಕ ವ್ಯಾಪಾರ ಒಪ್ಪಂದವನ್ನು ರೂಪಿಸಲು ಗಂಭೀರವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಸುಂಕ ಇಳಿಕೆಯು ಮಾರುಕಟ್ಟೆ ಪ್ರವೇಶ, ಸುಂಕೇತರ ಅಡೆತಡೆಗಳು ಮತ್ತು ಇತರ ವ್ಯಾಪಾರ-ಸಂಬಂಧಿತ ವಿಷಯಗಳನ್ನು ಪರಿಹರಿಸುವ ಬಲವಾದ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತದೆ. ಇದು ಉಭಯ ದೇಶಗಳ ನಡುವೆ ಸಮಗ್ರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಭದ್ರ ಬುನಾದಿ ಹಾಕಲಿದೆ.
PublicNext
04/02/2026 05:34 pm