ತುಮಕೂರು: ಸರ್ಕಾರದ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿ ಗಾಳಿಗೆ ತೂರಿ ಖಾಸಗಿ ಸ್ಲೀಪರ್ ಬಸ್‌ಗೆ ಅರ್ಹತಾ ಪ್ರಮಾಣ ಪತ್ರ (ಎಫ್.ಸಿ) ನೀಡಿದ ಪ್ರಕರಣ ತನಿಖೆಯಲ್ಲಿ ಬಯಲಾದ ತಕ್ಷಣ, ಸಂಬಂಧಿತ ಬಸ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸೈಯದ್ ಜಿಲಾನಿ ಅವರ ಹೆಸರಿನಲ್ಲಿರುವ KA-22B-5235 (ಮಾಡೆಲ್-2011) ಸಂಖ್ಯೆಯ ಎಸ್.ಆರ್.ಜೆ ಸ್ಲೀಪರ್ ಕೋಚ್ ಬಸ್‌ಗೆ ತುಮಕೂರು ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಫೆಬ್ರವರಿ 17, 2026 ರಂದು ಎಫ್.ಸಿ ನೀಡಲಾಗಿತ್ತು.
ಇದು ಸರ್ಕಾರದ ನಿಯಮಾನುಸಾರ ಕಡ್ಡಾಯವಾಗಿರುವ ತುರ್ತು ನಿರ್ಗಮನ ದ್ವಾರಗಳು ಹಾಗೂ ಅಗ್ನಿ ಪತ್ತೆ ಮತ್ತು ಶಮನ ವ್ಯವಸ್ಥೆ (FDSS) ಸೇರಿದಂತೆ ಅಗತ್ಯ ಸುರಕ್ಷತಾ ವ್ಯವಸ್ಥೆಗಳು ಸಮರ್ಪಕವಾಗಿ ಅಳವಡಿಸದಿದ್ದರೂ ಎಫ್.ಸಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಖಾಸಗಿ ಬಸ್ ಮಾಲೀಕರಾದ ಡಿ.ವಿ. ಪ್ರವೀಣ್ ಕುಮಾರ್ ನೀಡಿದ ದೂರಿನ ಮೇರೆಗೆ ಪ್ರಾದೇಶಿಕ ಸಾರಿಗೆ ಆಯುಕ್ತೆ ಗಾಯತ್ರಿದೇವಿ ತನಿಖೆಗೆ ಆದೇಶಿಸಿದ್ದರು.
ತನಿಖೆಯಲ್ಲಿ ನಿಯಮ ಉಲ್ಲಂಘನೆ ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದು, ಎಫ್.ಸಿ ನೀಡಿದ ತುಮಕೂರು ಆರ್‌ಟಿಒ ಅಧಿಕಾರಿಗಳಿಂದಲೇ ಬಸ್ ವಶಕ್ಕೆ ಪಡೆಯಲಾಗಿದೆ. ಬಸ್‌ಗೆ ನೀಡಿದ್ದ ಎಫ್.ಸಿ ರದ್ದುಪಡಿಸುವ ಪ್ರಕ್ರಿಯೆ ಆರಂಭವಾಗಿದ್ದು, ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯುಕ್ತೆ ಗಾಯತ್ರಿದೇವಿ ಎಚ್ಚರಿಕೆ ನೀಡಿದ್ದಾರೆ.
PublicNext
08/03/2026 05:47 pm
LOADING...