ದಾವಣಗೆರೆ : ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಈ ನಡುವೆ ಮಾಧ್ಯಮಗಳ ಮುಂದೆ ಮಾತನಾಡಿದ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಅಬ್ದುಲ್ ಜಬ್ಬರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಈ ವೇಳೆ ಮಾತನಾಡಿದ ಅವರು, “ಇದು ಹೊಸ ವಿಷಯವಲ್ಲ. 1991-94ರಿಂದಲೇ ಜಬ್ಬರ್ ಇದೇ ರೀತಿ ಮಾಡುತ್ತಾ ಬಂದಿದ್ದಾನೆ. ಯಾರೋ ಒಬ್ಬ ವ್ಯಕ್ತಿಯಿಂದ ಇಡೀ ಊರು ಹಾಳಾಗುವುದು ನಮಗೆ ಇಷ್ಟವಿಲ್ಲ. ಎಲ್ಲರೂ ಒಟ್ಟಾಗಿ ಕುಳಿತು ಚರ್ಚೆ ಮಾಡಿದರೆ ಅದಕ್ಕೊಂದು ಗೌರವ ಇರುತ್ತದೆ” ಎಂದು ಹೇಳಿದರು.
ಇನ್ನೂ ಮಾತನಾಡಿದ ಅವರು, “ನಾನು ಯಾಕೆ ಸುಮ್ಮನಿದ್ದೆ? ಇದು ಕಾರ್ಯಕರ್ತರ ಪಕ್ಷ. ಕಾರ್ಯಕರ್ತರು ಏನು ಹೇಳುತ್ತಾರೋ ಅದೇ ರೀತಿ ನಾವು ಕೆಲಸ ಮಾಡಬೇಕು. ಕಾರ್ಯಕರ್ತರಿಲ್ಲದೆ ಇಲ್ಲಿ ಯಾವ ಪುಂಗಿಯೂ ನಡೆಯುವುದಿಲ್ಲ” ಎಂದು ಹೇಳಿದರು.
ಪಕ್ಷದೊಳಗೆ ಕೇಳಿಬರುತ್ತಿರುವ ವಿಭಿನ್ನ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, “ಒಬ್ಬರು ಬಂದು ಒಂದು ಸ್ಟೇಟ್ಮೆಂಟ್ ಕೊಡುವುದು, ಇನ್ನೊಬ್ಬರು ಬಂದು ಮತ್ತೊಂದು ಹೇಳಿಕೆ ಕೊಡುವುದು ನೋಡಲು ಜೋಕರ್ ಕೆಲಸದಂತೆ ಕಾಣುತ್ತಿದೆ. ಪ್ರತಿಯೊಬ್ಬ ಕಾರ್ಯಕರ್ತನ ಅಭಿಪ್ರಾಯವನ್ನು ಪಡೆದುಕೊಂಡೇ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಸಚಿವರು ಬಹಿರಂಗವಾಗಿಯೇ ಅಬ್ದುಲ್ ಜಬ್ಬರ್ ಹೆಸರು ಉಲ್ಲೇಖಿಸಿ ಟೀಕೆ ಮಾಡಿರುವುದು ದಾವಣಗೆರೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ದಾವಣಗೆರೆ ದಕ್ಷಿಣ ಉಪಚುನಾವಣೆ ಹಿನ್ನೆಲೆಯಲ್ಲಿ ಈ ಹೇಳಿಕೆ ರಾಜಕೀಯ ಸಂಚಲನ ಮೂಡಿಸಿದೆ ಎಂದರು.
PublicNext
09/03/2026 08:27 pm