ದಾವಣಗೆರೆ: ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪ ಇಂದು ಐವರು ಆಕಾಂಕ್ಷಿಗಳೊಂದಿಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀನಿವಾಸ್ ದಾಸ ಕರಿಯಪ್ಪ, "ಸಾಂಕೇತಿಕವಾಗಿ ಐದು ಮಂದಿ ಆಕಾಂಕ್ಷಿಗಳು ಒಟ್ಟಾಗಿ ನಾಮಪತ್ರ ಸಲ್ಲಿಸಿದ್ದೇವೆ. ನಮ್ಮ ಮುಖಂಡರೊಂದಿಗೆ ಚರ್ಚಿಸಿ, ರಾಜ್ಯ ಮತ್ತು ರಾಷ್ಟ್ರ ನಾಯಕರು, ಜಿಲ್ಲೆಯ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮತ್ತೊಂದು ಬಾರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸುತ್ತೇವೆ," ಎಂದು ತಿಳಿಸಿದರು.
"ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮತದಾರರು ಸ್ವಯಂಪ್ರೇರಿತರಾಗಿ ಬದಲಾವಣೆಗೆ ಸಿದ್ಧರಾಗಿದ್ದಾರೆ. ಈ ಬಾರಿ ನಾವು ಖಂಡಿತಾ ಗೆಲ್ಲುತ್ತೇವೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ, ಎಸ್.ಎಸ್. ಮಲ್ಲಿಕಾರ್ಜುನ್ ಅವರ 'ನಗುತ್ತಾ ಚುನಾವಣೆ ಮಾಡೋಣ' ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕರಿಯಪ್ಪ, "ಚುನಾವಣೆಯಲ್ಲಿ ಕಾಂಗ್ರೆಸ್ ನಮ್ಮ ಪ್ರಮುಖ ಎದುರಾಳಿ. ನಮ್ಮ ಗೆಲುವಿಗೆ ಬೇಕಾದ ಎಲ್ಲಾ ತಂತ್ರಗಾರಿಕೆಗಳನ್ನು ರೂಪಿಸುತ್ತೇವೆ. ನಾವು ಗೆದ್ದೇ ಗೆಲ್ಲುತ್ತೇವೆ. ಈ ಚುನಾವಣೆಯು ಒಂದು ರೀತಿಯ ಮಹಾಭಾರತ ಯುದ್ಧವಿದ್ದಂತೆ. ನಾವು ಐವರು ಪಾಂಡವರು ಸೇರಿ ಕೌರವರ ಜೊತೆ ಯುದ್ಧ ಮಾಡಿ ಗೆಲ್ಲುತ್ತೇವೆ," ಎಂದರು. ಅಹಿಂದ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಕೆಲಸ ಮಾಡುವುದಾಗಿ ಹೇಳಿದರು.
PublicNext
20/03/2026 05:22 pm