ಬಳ್ಳಾರಿ : ಗಣಿಬಾಧಿತ ಪ್ರದೇಶಗಳ ಪರಿಸರ ಮತ್ತು ಜನರ ಬದುಕಿನ ಪುನಶ್ಚೇತನಕ್ಕಾಗಿ ಕೆಎಂಇಆರ್‌ಸಿ ನಿಧಿಯನ್ನು ಸಮರ್ಪಕವಾಗಿ ಬಳಸಬೇಕು ಎಂದು ಒತ್ತಾಯಿಸಿ ಹರಗಿನಡೋಣಿ ಗ್ರಾಮದ ನಿವಾಸಿಗಳು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು.
ಗಣಿಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಗ್ರಾಮಸ್ಥರು ಹಲವು ಬೇಡಿಕೆಗಳನ್ನು ಮುಂದಿಟ್ಟರು. ಕಳೆದ ಎರಡು ದಶಕಗಳ ಹಿಂದೆ ನಡೆದ ಅಕ್ರಮ ಗಣಿಗಾರಿಕೆಯಿಂದ ಬಳ್ಳಾರಿ ಸೇರಿದಂತೆ ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಪರಿಸರ ಹಾನಿಯಾಗಿದ್ದು, ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಗಣಿಬಾಧಿತ ಪ್ರದೇಶಗಳ ಪುನಶ್ಚೇತನಕ್ಕಾಗಿ ಸರ್ವೋಚ್ಚ ನ್ಯಾಯಾಲಯ ರೂಪಿಸಿದ ಸಮಗ್ರ ಪರಿಸರ ಯೋಜನೆ (ಸಿ.ಇ.ಪಿ.ಎಂ.ಐ.ಝೆಡ್) ಅಡಿಯಲ್ಲಿ ಸ್ಥಾಪಿತವಾದ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ನಿಯಮಿತ (ಕೆಎಂಇಆರ್‌ಸಿ) ಸಂಸ್ಥೆಯ ಬಳಿ ಸಾವಿರಾರು ಕೋಟಿ ರೂಪಾಯಿ ನಿಧಿ ಇದ್ದರೂ, ಗಣಿಬಾಧಿತ ಗ್ರಾಮಗಳಿಗೆ ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಆರೋಪಿಸಿದರು.
ಹರಗಿನಡೋಣಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಕೆಎಂಇಆರ್‌ಸಿ ನಿಧಿಯಿಂದ ಕೂಡಲೇ ಕೆರೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಜೊತೆಗೆ ವಸತಿ ಇಲ್ಲದವರಿಗೆ ಮನೆ ನಿರ್ಮಾಣ, ಸರ್ಕಾರಿ ಶಾಲೆಯ ಉನ್ನತೀಕರಣ, ಒಳಚರಂಡಿ ವ್ಯವಸ್ಥೆ, ರಸ್ತೆ ಅಭಿವೃದ್ಧಿ, ಮಹಿಳೆಯರಿಗೆ ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಗಣಿಗಾರಿಕೆಯಿಂದ ಹಾಳಾದ ಪರಿಸರವನ್ನು ಪುನಶ್ಚೇತನಗೊಳಿಸಲು ಅರಣ್ಯಾಭಿವೃದ್ಧಿ ಯೋಜನೆ ಜಾರಿಗೊಳಿಸಿ ಗಣಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಒದಗಿಸಬೇಕು. ಪರಿಸರ ನಿಯಮ ಉಲ್ಲಂಘಿಸುತ್ತಿರುವ ಮೆದು ಕಬ್ಬಿಣ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೂಡಾ ಒತ್ತಾಯಿಸಿದರು.
PublicNext
10/03/2026 05:08 pm