ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳಾ ಆಯೋಗದ ಮುಂದೆ ನೂರಾರು ಅಹವಾಲು : ಪೊಲೀಸರಿಗೆ ಲಿಂಗ ಸೂಕ್ಷ್ಮತೆಯ ಅರಿವಿರಬೇಕು - ಡಾ: ನಾಗಲಕ್ಷ್ಮಿ ಚೌಧರಿ

ತುಮಕೂರು : ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಲಿಂಗ ಸೂಕ್ಷ್ಮತೆಯಿರಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ: ನಾಗಲಕ್ಷ್ಮಿ ಚೌಧರಿ ಕಿವಿಮಾತು ಹೇಳಿದ್ದಾರೆ.

ಜಿಲ್ಲೆಯ ಬಾಲಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳೆಯರ ದೂರು ಹಾಗೂ ಅಹವಾಲುಗಳನ್ನು ಆಲಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು, ದೌರ್ಜನ್ಯಕ್ಕೊಳಗಾದ ಮಹಿಳೆಯರು ಪೊಲೀಸ್ ಠಾಣೆಗಳಿಗೆ ಹೋದ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಮಹಿಳೆಯರಿಗೆ ಸೌಜನ್ಯದ ಮಾತುಗಳನ್ನಾಡದೆ ಅಗೌರವದಿಂದ ನಡೆಸಿಕೊಂಡ ಬಗ್ಗೆ ಸಭೆಯಲ್ಲಿ ಕೆಲವು ಪ್ರಕರಣಗಳನ್ನು ಗಮನಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಅಥವಾ ಯಾವುದೇ ಸರ್ಕಾರಿ ಇಲಾಖೆ ವ್ಯವಹರಿಸುವಾಗ ಲಿಂಗ ಸೂಕ್ಷ್ಮತೆಯನ್ನು ಅರಿಯಬೇಕು ಎಂದು ಅವರು ಹೇಳಿದರು.

ಮಹಿಳೆಯರಿಗೆ ಸರಿಯಾದ ಸ್ಪಂದನೆ ಸಿಗಬೇಕೆಂಬ ಹಿನ್ನೆಲೆಯಲ್ಲಿ ಹಾಗೂ ಸಂಬಂಧಿಸಿದ ಅಧೀನ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡುವಂತೆ ತಿಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದರು.

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಅಥವಾ ಇನ್ನಿತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರಿಯಾದ ಸ್ಪಂದನೆ ಸಿಗದಿದ್ದರೆ ಇಲಾಖೆ ಬಗ್ಗೆ ಜನರಲ್ಲಿ ವಿಶ್ವಾಸ ಹೋಗುತ್ತದೆ. ಅಂತಹ ಕಳಂಕವನ್ನು ತರದಂತೆ ಅಧೀನ ಅಧಿಕಾರಿಗಳಿಗೆ ಸೂಚಿಸಬೇಕು ಎಂದರು.

ಇಂದಿನ ಅಹವಾಲು ಸ್ವೀಕಾರ ಸಭೆಯಲ್ಲಿ ಮಹಿಳೆಯರ ಸಾಕಷ್ಟು ಸಮಸ್ಯೆಗಳಿಗೆ ಸ್ಪಂದನೆ ಸಿಕ್ಕಿದೆ ಎಂಬ ವಿಶ್ವಾಸ ನನಗಿದೆ. ಸಂಬಂಧಿಸಿದ ಇಲಾಖೆಗಳ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, ಅಹವಾಲುಗಳಿಗೆ ಉತ್ತರ ನೀಡಿದ್ದಾರೆ ಹಾಗೂ ಸಮಸ್ಯೆಗೆ ಸ್ಪಂದನೆ ನೀಡಿದ್ದಾರೆ ಎಂದ ಅವರು, ಪ್ರತಿ ಬಾರಿ ಮಹಿಳಾ ಆಯೋಗವೇ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಮನಸ್ಥಿತಿಯನ್ನು ಅಧಿಕಾರಿಗಳು ಬದಿಗಿರಿಸಿ ತಮ್ಮ ವ್ಯಾಪ್ತಿಯಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಹಾಗೂ ಅವರ ಸಮಸ್ಯೆಗೆ ಸ್ಪಂದನೆಯನ್ನು ನೀಡಬೇಕಿದೆ ಎಂದರು.

ತಿಂಗಳಿಗೊಮ್ಮೆಯಾದರೂ ಪಂಚಾಯ್ತಿ ಮಟ್ಟದಲ್ಲಿ ಮಹಿಳೆಯರ ಗ್ರಾಮ ಸಭೆ ನಡೆಸಿದಲ್ಲಿ ಮಹಿಳೆಯರ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದ ಅವರು, ಈ ಸಂಬಂಧ ಸರ್ಕಾರಕ್ಕೂ ಹಾಗೂ ಜಿಲ್ಲಾಡಳಿತಕ್ಕೂ ಪತ್ರ ಬರೆಯುವುದಾಗಿ ಡಾ: ನಾಗಲಕ್ಷ್ಮೀ ಚೌದರಿ ಅವರು ತಿಳಿಸಿದರು.

ಜಿಲ್ಲಾ ಸಾಂತ್ವನ ಕೇಂದ್ರ ಹಾಗೂ ಸಖಿ ಕೇಂದ್ರಗಳಿಂದ ಮಹಿಳೆಯರಿಗೆ, ತಾಯಂದಿರಿಗೆ ಸಹಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಸಾಂತ್ವನ ಕೇಂದ್ರಗಳನ್ನು ಮುಚ್ಚದಂತೆ ಆಯೋಗವು ಸರ್ಕಾರಕ್ಕೆ ಪತ್ರ ಬರೆಯಲಿದೆ ಎಂದರು.

ರಾಜ್ಯದಾದ್ಯಂತ 29 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ರಾಯಚೂರು ಬಿಟ್ಟರೆ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮಹಿಳಾ ಸಮಸ್ಯೆಗಳನ್ನು ಹಾಗೂ ದೂರುಗಳನ್ನು ಸ್ವೀಕರಿಸಲಾಗಿದೆ. ಬಾಣಂತಿಯರನ್ನೂ ಊರಿಂದ ಹೊರಗಿಡುವ ಅನಿಷ್ಠ ಪದ್ಧತಿ ಈ ಜಿಲ್ಲೆಯಲ್ಲಿ ಇದ್ದು, ಈ ಮೌಢ್ಯವನ್ನು ತೊಡೆದು ಹಾಕಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಕಾನೂನನ್ನು ನಿರ್ಧಾಕ್ಷಿಣ್ಯವಾಗಿ ಜಾರಿಗಳಿಸಿದಾಗ ಮಾತ್ರ ಮೌಢ್ಯತೆಯ ಜನರಲ್ಲಿ ಜಾಗೃತಿ ಮೂಡಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ತಕ್ಷಣ ಕ್ರಮ ವಹಿಸಬೇಕಿದೆ ಎಂದರು.

ಪ್ರಸಕ್ತ ವಿಶ್ವ ಮಹಿಳಾ ದಿನಾಚರಣೆಯ ಘೋಷವಾಕ್ಯ “ಹಕ್ಕು, ನ್ಯಾಯ ಮತ್ತು ಕ್ರಮ” ಎಂಬುದೇ ಆಗಿದೆ. ಮಹಿಳೆಯರು ಈ ನಿಟ್ಟಿನಲ್ಲಿ ತಮ್ಮ ಹಕ್ಕಿಗಾಗಿ, ನ್ಯಾಯ ಪಡೆಯುವುದಕ್ಕಾಗಿ ಹಾಗೂ ತಮ್ಮ ಬದುಕಿನಲ್ಲಿ ನೆಮ್ಮದಿ ತಂದುಕೊಳ್ಳುವುದಕ್ಕಾಗಿ ಕಾನೂನಿನ ಜ್ಞಾನ ಪಡೆಯಬೇಕು ಎಂಬುದು ಆಯೋಗದ ಆಶಯ ಎಂದು ಹೇಳಿದರು.

ಕೌಟುಂಬಿಕ ಕಲಹಗಳು, ಆಸ್ತಿ ವಿವಾದಗಳು, ವಂಚನೆ ಹಾಗೂ ಮಹಿಳಾ ದೌಜ್ಯನ್ಯ ಪ್ರಕರಣಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಹವಾಲುಗಳು ಸಭೆಯಲ್ಲಿ ವ್ಯಕ್ತವಾದವು.

ಮಗುವಿಗೆ ಚಿರಾಗ್ ಎಂದು ನಾಮಕರಣ

ತುಮಕೂರಿನ ಹನುಮಂತಪುರದ ನಾಗಮಣಿ ಎಂಬ ಮಹಿಳೆ ತಮ್ಮ 3 ತಿಂಗಳ ಮಗುವಿನೊಂದಿಗೆ ಆಗಮಿಸಿ ಮಹಿಳೆಯರ ಕ್ಷೇಮಾಭಿವೃದ್ದಿಗಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಮಹಿಳೆಯರಿಗೆ ಶಕ್ತಿಯಾಗಿರುವ ಆಯೋಗದ ಅಧ್ಯಕ್ಷರಾದ ತಾವು ತಮ್ಮ ಮಗುವಿಗೆ ನಾಮಕರಣ ಮಾಡಬೇಕೆಂದು ಕೋರಿಕೆಯಿಟ್ಟಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ: ನಾಗಲಕ್ಷ್ಮೀ ಚೌಧರಿ ಅವರು ಚಿರಾಗ್ ಎಂದು ನಾಮಕರಣ ಮಾಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಈಶ್ವರಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪುರುಷೋತ್ತಮ್, ತುಮಕೂರು ಮಹಾನಗರಪಾಲಿಕೆ ಆಯುಕ್ತೆ ಶುಭ ಬಿ., ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಡಾ: ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

13/03/2026 07:47 am

Cinque Terre

1.04 K

Cinque Terre

0

ಸಂಬಂಧಿತ ಸುದ್ದಿ