ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ 14 ಪಂಚಾಯಿತಿ ಸೇರ್ಪಡೆ ಮಾಡುವ ಪ್ರಸ್ತಾವನೆಯನ್ನು ಸರ್ಕಾರ ಕೈ ಬಿಟ್ಟಿದೆ, ಇದು ಗ್ರಾಮಾಂತರ ಕ್ಷೇತ್ರಕ್ಕೆ ಬಿಗ್ ರಿಲೀಫ್ ನೀಡಿದೆ.
ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಅವರು ತುಮಕೂರು ತಾಲ್ಲೂಕು ವ್ಯಾಪ್ತಿಯಲ್ಲಿನ 14 ಗ್ರಾಮ ಪಂಚಾಯಿತಿಗಳ 54 ಗ್ರಾಮಗಳನ್ನು ಬೃಹತ್ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಿ, ತುಮಕೂರು ಮಹಾನಗರ ಪಾಲಿಕೆಯನ್ನು ವಿಸ್ತರಿಸಲಾಗುತ್ತಿದ್ದು, ಈ 14 ಗ್ರಾಮ ಪಂಚಾಯಿತಿಗಳ ಅವಧಿ ಮುಗಿದ ನಂತರ ಗ್ರಾಮ ಪಂಚಾಯಿತಿಗಳ ಚುನಾವಣೆಗಳನ್ನು ನಡೆಸಲಾಗುತ್ತದೆಯೇ ಎಂಬುದರ ಕುರಿತು ಅಧಿವೇಶನದಲ್ಲಿ ನಗರಾಭಿವೃದ್ಧಿ ಸಚಿವರ ಗಮನವನ್ನು ಸೆಳೆದು ಪ್ರಶ್ನೆ ಎತ್ತಿದ್ದರು.
ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ 14 ಗ್ರಾಮ ಪಂಚಾಯಿತಿಗಳ 54 ಗ್ರಾಮಗಳನ್ನು ಸೇರ್ಪಡೆಗೊಳಿಸಿ ವ್ಯಾಪ್ತಿಯನ್ನು ವಿಸ್ತರಿಸಲು ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ ರವರು ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ ರವರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಅಗತ್ಯ ದಾಖಲೆಗಳೊಂದಿಗೆ ಸದರಿ ದಾಖಲೆಗಳನ್ವಯ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ ರವರು ಡಿಸೆಂಬರ್-2025 ರ ಮಾಹೆಯಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ರ ಸೆಕ್ಷನ್-3 & 4 ರಲ್ಲಿನ ಮಾನದಂಡಗಳಲ್ಲಿರುವಂತೆ 2011 ರ ಜನಗಣತಿಯನ್ವಯ ಕನಿಷ್ಠ 3.00 ಲಕ್ಷ ಜನಸಂಖ್ಯೆ, ಪ್ರತೀ ಚದರ ಕಿಲೋ ಮೀಟರ್‌ಗೆ ಕನಿಷ್ಠ 3,000 ಜನಸಾಂದ್ರತೆ ಇರುವಿಕೆ, ಮತ್ತಿತರ ಅಂಶಗಳನ್ನು ಪೂರೈಸುವ ಬಗ್ಗೆ ನಿಯಮಾನುಸಾರ ಪರಿಶೀಲಿಸಲಾಗಿರುತ್ತದೆ.
ಆದರೆ, ರಾಷ್ಟ್ರದಾದ್ಯಂತ ಜನಗಣತಿಯನ್ನು ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ, ಕರ್ನಾಟಕ, ಬೆಂಗಳೂರು ರವರ ನಿರ್ದೇಶನದನ್ವಯ ರಾಜ್ಯದಲ್ಲಿ ಹೊಸ ನಗರ ಸ್ಥಳೀಯ ಸಂಸ್ಥೆಗಳನ್ನು ರಚಿಸುವ ಮತ್ತು ಗಡಿಗಳನ್ನು ಮಾರ್ಪಡಿಸುವ ಕಾಲಾವಕಾಶವು ದಿನಾಂಕ:31/12/2025 ಕ್ಕೆ ಮುಕ್ತಾಯಗೊಂಡಿರುತ್ತದೆ.
ಅದರಂತೆ, ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಸ್ತಾವನೆಗೆ ಸಾಕಷ್ಟು ಕಾಲಾವಕಾಶ ಲಭ್ಯವಾಗದ ಕಾರಣ ಪ್ರಸ್ತಾವನೆಯನ್ನು ಪರಿಶೀಲನೆಯಿಂದ ಕೈಬಿಡಲಾಗಿರುತ್ತದೆ. ಪ್ರಸ್ತಾವನೆಯನ್ನು ಪರಿಶೀಲನೆಯಿಂದ ಕೈಬಿಟ್ಟಿರುವ ಕಾರಣ ಗ್ರಾಮ ಪಂಚಾಯಿತಿಗಳಲ್ಲಿನ ಚುನಾವಣೆಗಳಿಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ.
ಮುಂದಿನ ದಿನಗಳಲ್ಲಿ ಹೊಸ ನಗರ ಸ್ಥಳೀಯ ಸಂಸ್ಥೆಗಳನ್ನು ರಚಿಸಲು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯನ್ನು ವಿಸ್ತರಿಸಲು ಕಾಲಾವಕಾಶವನ್ನು ಕಲ್ಪಿಸಿದ ನಂತರ ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ನಿಯಮಾನುಸಾರ ಪರಿಶೀಲಿಸಲು ಅವಕಾಶವಾಗುತ್ತದೆ ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬಿ ಎಸ್ ಸುರೇಶ್ ಉತ್ತರ ನೀಡಿದ್ದು ಇದು ಗ್ರಾಮಾಂತರ ಕ್ಷೇತ್ರಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
Kshetra Samachara
17/03/2026 06:20 pm