ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು ಅಂಗನವಾಡಿ ನೇಮಕಾತಿ: ಸಾವಿರಾರು ಕನಸುಗಳಿಗೆ ರೆಕ್ಕೆ, ತಾತ್ಕಾಲಿಕ ಪಟ್ಟಿ ಬಿಡುಗಡೆ!

ತುಮಕೂರು : ಜಿಲ್ಲೆಯಲ್ಲಿ ಖಾಲಿಯಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳ ತಾತ್ಕಾಲಿಕ ನೇಮಕಾತಿ ಆಯ್ಕೆ ಪಟ್ಟಿಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಆಯ್ಕೆ ಸಮಿತಿ ಅಂತಿಮಗೊಳಿಸಿದೆ.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ನೇಮಕಾತಿ ಸಂಬಂಧಿಸಿದ ಆಯ್ಕೆ ಸಮಿತಿ ಸಭೆ ಜಿಲ್ಲೆಯ ಎಲ್ಲ ಹತ್ತು ತಾಲೂಕುಗಳ ಅರ್ಜಿಗಳನ್ನು ಪರಿಶೀಲಿಸಿ ಅಂತಿಮಗೊಳಿಸಿತು.

2025 ಡಿಸೆಂಬರ್‌ 9ರಂದು ಜಿಲ್ಲೆಯ ಎಲ್ಲ ಖಾಲಿ ಇದ್ದ ಅಂಗನವಾಡಿ ಕಾರ್ಯಕರ್ತೆಯರ/ಸಹಾಯಕಿಯರ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಜನವರಿ 9 2026ಕ್ಕೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ನೀಡಲಾಗಿತ್ತು. ಪ್ರಸ್ತುತ ಅರ್ಜಿಗಳನ್ನು ಪರಿಶೀಲಿಸಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 117 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಪ್ರಕಟಣೆ ಹೊರಡಿಸಲಾಗಿತ್ತು.

ಒಟ್ಟು 3072 ಅರ್ಜಿಗಳು ಬಂದಿದ್ದು 444 ಅರ್ಜಿಗಳು ಪುರಸ್ಕೃತವಾಗಿವೆ, 2628 ತಿರಸ್ಕೃತವಾಗಿವೆ. ಉಳಿದ 9 ಕೇಂದ್ರಗಳಿಗೆ ಮರು ಪ್ರಕಟಣೆ ಮಾಡಬೇಕಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ತಿಳಿಸಿದರು.

ಅಂಗನವಾಡಿ ಸಹಾಯಕಿಯರ ಆಯ್ಕೆಗಾಗಿ 829 ಕೇಂದ್ರಗಳಿಗೆ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಲಾಗಿತ್ತು. 3026 ಅರ್ಜಿಗಳು ಬಂದಿದ್ದು, 1316 ಅರ್ಜಿಗಳು ಅರ್ಹ ಅರ್ಜಿಗಳಾಗಿದ್ದವು, 1710 ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿವೆ. 225 ಕೇಂದ್ರಗಳಿಗೆ ಮರು ಪ್ರಕಟಣೆ ಹೊರಡಿಸಬೇಕಿದೆ ಎಂದು ಅವರು ತಿಳಿಸಿದರು.

ಎರಡೂ ಹುದ್ದೆಗಳಿಗೆ ಆಯ್ಕೆಯಾಗಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಆಯಾ ಅಂಗನವಾಡಿ ಕೇಂದ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿ, ಅಂಗನವಾಡಿ ಕೇಂದ್ರ, ಆ ಊರಿನ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸೂಚನಾ ಫಲಕಗಳಲ್ಲಿ ಪ್ರಕಟಿಸಲಾಗುವುದು.

ಆಕ್ಷೇಪಣೆಗಳಿದ್ದಲ್ಲಿ ಪ್ರಕಟಿಸಿದ ಏಳು ದಿನಗಳೊಳಗೆ ಆಯಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬೇಕು. ಏಳು ದಿನಗಳ ನಂತರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ತಿಳಿಸಿದರು.

ಆಯ್ಕೆ ಸಮಿತಿ ಸಭೆಯಲ್ಲಿ ಸಮಿತಿ ಉಪಾಧ್ಯಕ್ಷೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ವಿ.ಅಶ್ವಜ, ಸದಸ್ಯರಾದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಶಾಲಾ ಶಿಕ್ಷಣ ಇಲಾಖೆ ಉಭಯ ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರಾದ ರಘುಚಂದ್ರ, ಮಾಧವ ರೆಡ್ಡಿ, ತುಮಕೂರು ಮಹಾನರಪಾಲಿಕೆ ಆಯುಕ್ತೆ ಶುಭ, ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಡಾ.ಸಿದ್ದರಾಮಪ್ಪ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

10/03/2026 07:55 pm

Cinque Terre

1.3 K

Cinque Terre

0

ಸಂಬಂಧಿತ ಸುದ್ದಿ