ಚಿಕ್ಕಮಗಳೂರು: ಎ ಐ ಕೃತಕ ಬುದ್ಧಿಮತ್ತೆ ಹಾಗೂ ನೂತನ ತಂತ್ರಜ್ಞಾನಗಳ ಬಳಕೆ ಕುರಿತ ಎರಡು ದಿನಗಳ ತರಬೇತಿ ಶಿಬಿರಕ್ಕೆ ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ಕೇವಲ ಕಾವಲುಗಾರರಾಗಿ ಕೆಲಸ ಮಾಡುವುದಷ್ಟೇ ಅಲ್ಲದೆ, ನವ ಸಮಾಜದ ಉತ್ಕೃಷ್ಟತೆಗಾಗಿ ಮಾದರಿಯಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು. ಬಡವರ ಕಷ್ಟಗಳು ಮತ್ತು ಸಮಾಜದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಜವಾಬ್ದಾರಿ ಮಾಧ್ಯಮಗಳ ಮೇಲಿದ್ದು, ತಂತ್ರಜ್ಞಾನದ ವೇಗಕ್ಕೆ ಮಾರುಹೋಗಿ ಸುಳ್ಳು ಸುದ್ದಿಗಳನ್ನು ಬಿತ್ತರಿಸಬಾರದು ಎಂದು ಅವರು ಕಿವಿಮಾತು ಹೇಳಿದರು. ವಿಶೇಷವಾಗಿ ಅವಘಡಗಳು ಸಂಭವಿಸಿದಾಗ ವರದಿಗಾರರು ವಿಡಿಯೋ ಚಿತ್ರೀಕರಣಕ್ಕಿಂತ ಜೀವ ಉಳಿಸುವ ಕಾರ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಪಿಸಿಸಿ ವಕ್ತಾರ ಹೆಚ್.ಹೆಚ್. ದೇವರಾಜ್ ಅವರು ಯುವಜನತೆ ಮೊಬೈಲ್ ಬಳಕೆಯನ್ನು ಮಿತಗೊಳಿಸಬೇಕು ಎಂದು ತಿಳಿಸಿದರೆ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಅವರು ತಂತ್ರಜ್ಞಾನವನ್ನು ದೇಶದ ಒಳಿತಿಗಾಗಿ ಬಳಸಿಕೊಳ್ಳಲು ಮನವಿ ಮಾಡಿದರು. ಸಿಪಿಐ ಕಾರ್ಯದರ್ಶಿ ಜಿ. ರಘು ಮತ್ತು ಪತ್ರಕರ್ತರ ಸಂಘದ ಮಾಜಿ ರಾಜ್ಯಾಧ್ಯಕ್ಷ ಎನ್. ರಾಜು ಅವರು ಕೂಡ ತಂತ್ರಜ್ಞಾನದ ಸದುಪಯೋಗದ ಬಗ್ಗೆ ಮಾತನಾಡಿದರು. ರೈತ ಸಂಘದ ಮುಖಂಡ ಗುರುಶಾಂತಪ್ಪ ಅವರು ಈ ಉಚಿತ ತರಬೇತಿ ಶಿಬಿರದ ಉದ್ದೇಶವನ್ನು ಪ್ರಾಸ್ತಾವಿಕವಾಗಿ ವಿವರಿಸಿದರು.
ನಂತರ ನಡೆದ ತರಬೇತಿ ಅವಧಿಯಲ್ಲಿ ನಂಜೇಶ್ ಬೆಣ್ಣೂರು ಅವರು ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಗಳ ಮೇಲಾಗುವ ಪರಿಣಾಮ ಹಾಗೂ ದೈನಂದಿನ ಬದುಕಿನಲ್ಲಿ ಅದರ ಬಳಕೆ ಕುರಿತು ಮಾಹಿತಿ ನೀಡಿದರು. ಪ್ರೊ. ವಿವೇಕಾನಂದ ಅವರು ಅಂತರ್ಜಾಲದ ದುರುಪಯೋಗ ಮತ್ತು ಹೊಸ ತಲೆಮಾರಿನ ಪಲ್ಲಟಗಳ ಬಗ್ಗೆ ತಿಳಿಸಿಕೊಟ್ಟರು. ಈ ಶಿಬಿರದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಮುಖಂಡರು, ಸಾಹಿತಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ರವೀಶ್ ಕ್ಯಾತನಬೀಡು, ಹೆಚ್.ಎಸ್. ಮಂಜಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Kshetra Samachara
14/03/2026 08:38 pm