ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಎಡೆಚಿಟ್ಟೆ ಗ್ರಾಮದ ವಿವೇಕ್ ಮತ್ತು ಸೌಮ್ಯ ದಂಪತಿಯ ಮುದ್ದಿನ ಮಗ ಪೃಥ್ವಿ. ಇನ್ನೂ ಸರಿಯಾಗಿ ಮಾತಾಡಲೂ ಬಾರದ ವಯಸ್ಸಿನಲ್ಲಿ, ಆಟವಾಡಬೇಕಾದ ಈ ಪುಟ್ಟ ಕಂದಮ್ಮ, ಕಣ್ಣಿನ ಕ್ಯಾನ್ಸರ್ ಎಂಬ ಭೀಕರ ರೋಗದೊಂದಿಗೆ ಹೋರಾಟ ನಡೆಸುತ್ತಿದ್ದಾನೆ.
ಬಲಗಣ್ಣಿನಲ್ಲಿ ಆರಂಭವಾದ ರೋಗ ಗಂಭೀರ ಹಂತ ತಲುಪಿದ್ದು, ಕಣ್ಣಿನ ಒಳಭಾಗವೇ ಹಾನಿಗೊಳಗಾಗಿತ್ತು. ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆ ಮಾಡಿ ಕಣ್ಣು ತೆಗೆದುಹಾಕಬೇಕು, ಇಲ್ಲದಿದ್ದರೆ ರೋಗ ಮೆದುಳಿಗೂ ಹರಡುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಶಿವಮೊಗ್ಗಕ್ಕೆ ಹೋಗಲು ಬಸ್ ಟಿಕೆಟ್ ಹಣಕ್ಕೂ ಪರದಾಡುವ ಪರಿಸ್ಥಿತಿಯಲ್ಲಿ, ಮಗುವಿನ ಜೀವ ಉಳಿಸುವುದು ಕನಸಾಗಿ ಉಳಿದಿತ್ತು. ಮಗುವಿನ ನೋವನ್ನು ನೋಡುತ್ತಾ ಕಣ್ಣೀರು ಹಾಕುವುದರ ಹೊರತಾಗಿ ಅವರ ಬಳಿ ಮತ್ತೇನು ಇರಲಿಲ್ಲ. ವಿಚಾರ ತಿಳಿದು ಶಾಸಕ ಬೇಳೂರು ಗೋಪಾಲಕೃಷ್ಣ ಮಾನವೀಯತೆ ಮೆರೆದಿದ್ದಾರೆ. ಮಗುವಿನ ಚಿಕಿತ್ಸೆ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ತಹಶೀಲ್ದಾರ್ ಭರತ್ ರಾಜ್ ಸ್ಥಳಕ್ಕೆ ಭೇಟಿ ನೀಡಿ, ಬಿಪಿಎಲ್ ಕಾರ್ಡ್ ಹಾಗೂ ಆಧಾರ್ ಸಮಸ್ಯೆಯನ್ನು ಶೀಘ್ರ ಪರಿಹರಿಸುವುದಾಗಿ ಭರವಸೆ ನೀಡಿದರು. ಕಣ್ಣಿನ ಸ್ಕ್ಯಾನ್ ಸಮಸ್ಯೆಯಿಂದ ನಿಂತಿದ್ದ ಪ್ರಕ್ರಿಯೆ ಇದೀಗ ಮುಂದುವರಿಯಲಿದ್ದು, ಸರ್ಕಾರದ ಸೌಲಭ್ಯಗಳೂ ಕುಟುಂಬಕ್ಕೆ ದೊರೆಯಲಿವೆ.
ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಮಾತನಾಡಿ ಕ್ಯಾನ್ಸರ್‌ಗೆ ತುತ್ತಾಗಿರುವ ಮಗುವಿನ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆಯೇ ಶಾಸಕರು ತಕ್ಷಣ ಸ್ಪಂದಿಸಿ ಅಗತ್ಯ ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮಗುವಿನ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆ ವಿಳಂಬವಾಗದಂತೆ ವ್ಯವಸ್ಥೆ ಮಾಡಲಾಗಿದ್ದು, ಅದರ ಸಂಪೂರ್ಣ ವೆಚ್ಚವನ್ನು ಶಾಸಕರೇ ಭರಿಸಲಿದ್ದಾರೆ. ಈ ಕುರಿತು ಪೋಷಕರಿಗೂ ಮಾಹಿತಿ ನೀಡಲಾಗಿದ್ದು, ಮಂಗಳವಾರ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.
Kshetra Samachara
28/03/2026 09:29 pm