ಹಾನಗಲ್ ತಾಲೂಕಿನ ಭೂಮಾಪನ ಇಲಾಖೆಯ 50ಕ್ಕೂ ಅಧಿಕ ಪರವಾನಗಿ ಹೊಂದಿದ ಭೂಮಾಪಕರು ಕಳೆದ ಒಂದು ತಿಂಗಳಿನಿಂದ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದಾಗಿ ತಾಲೂಕಿನಲ್ಲಿ ಸುಮಾರು 3 ಸಾವಿರ ಭೂಮಾಪನ ಪ್ರಕರಣಗಳು ಬಾಕಿ ಉಳಿದಿವೆ. ನಮಗೆ ಸೇವಾ ಭದ್ರತೆ ಸಿಗುವವರೆಗೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಭೂಮಾಪಕರ ಸಂಘದ ತಾಲೂಕು ಅಧ್ಯಕ್ಷ ಮಹಮ್ಮದ್ ರಫೀಕ್ ಮಾಳಗಿ ಹೇಳಿದರು.
ಇನ್ನೂ ತಾಲೂಕಿನಲ್ಲಿ 2002ರಿಂದ ಪರವಾನಗಿ ಸಹಿತ ಭೂಮಾಪಕರಾಗಿ ಸೇವೆ ಸಲ್ಲಿಸುತ್ತಿರುವ ನಮಗೆ ಸರಿಯಾದ ವೇತನವಿಲ್ಲ. ಕಳೆದ 20 ವರ್ಷಗಳಿಂದ ಸರ್ಕಾರ ಕೇವಲ ಭರವಸೆ ನೀಡುತ್ತಿದೆ. ಒಂದು ಸರ್ವೆ ಪ್ರಕರಣಕ್ಕೆ ನಿಗದಿಯಾಗಿರುವ 1,200 ರೂ. ಸಂಭಾವನೆಯಲ್ಲಿ ಶೇ. 90ರಷ್ಟು ಬಾಕಿ ಉಳಿದಿದೆ.
ತಾಲೂಕಿನಲ್ಲಿ ಈವರೆಗೆ 60 ಸಾವಿರ ಪ್ರಕರಣಗಳನ್ನು ಪೂರ್ಣಗೊಳಿಸಿದ್ದೇವೆ. ಆದರೆ, ಈಗ ಮುಷ್ಕರದ ಕಾರಣದಿಂದ ಮತ್ತೆ 3 ಸಾವಿರ ಪ್ರಕರಣ ಬಾಕಿ ಉಳಿದಿವೆ. ಇಲಾಖೆಯಲ್ಲಿ 7 ಜನ ಸರ್ಕಾರಿ ಭೂಮಾಪಕರಿದ್ದರೂ, ಕ್ಷೇತ್ರಕ್ಕೆ ತೆರಳಿ ಅಳತೆ ಮಾಡುವವರು ಕೇವಲ ಇಬ್ಬರು ಮಾತ್ರ. ಆದರೂ, ಕಂದಾಯ ಗ್ರಾಮ, ಪೋಡಿ ಮುಕ್ತಿ, ಸ್ವಾಮ್ಯತ್ವ, ಬರಕಾಸ್ತ ಪೋಡಿ, ಕೋರ್ಟ್ ಮತ್ತು ವ್ಯಾಜ್ಯ ಪ್ರಕರಣಗಳು ಹಾಗೂ ಆಕಾರಬಂದ್ ಸೇರಿದಂತೆ ಕಠಿಣ ಅಳತೆ ಕಾರ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೂ ಸರ್ಕಾರ ನಮಗೆ ಕನಿಷ್ಠ ಸೌಲಭ್ಯ ನೀಡುತ್ತಿಲ್ಲ ಎಂದರು.
ಇನ್ನೂ ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ ಭೂಮಾಪಕರ ಮುಷ್ಕರದಿಂದ ಕಂದಾಯ ಗ್ರಾಮ, ಪೋಡಿ ಮುಕ್ತಿ, ಸ್ವಾಮ್ಯತ್ವ, ಬರಕಾಸ್ತ ಪೋಡಿ, ಕೋರ್ಟ್ ಮತ್ತು ವ್ಯಾಜ್ಯ ಪ್ರಕರಣಗಳು ಹಾಗೂ ಆಕಾರಬಂದ್ ಸೇರಿದಂತೆ ಸಾರ್ವಜನಿಕರು ಮತ್ತು ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಸರ್ಕಾರ ಕೂಡಲೇ ಅವರ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ರೈತರೇ ಸೇರಿ ಸರ್ವೆ ಇಲಾಖೆಗೆ ಬೀಗ ಹಾಕಿ, ಭೂಮಾಪಕರ ಮುಷ್ಕರಕ್ಕೆ ಬೆಂಬಲ ನೀಡಬೇಕಾಗುತ್ತದೆ ಎಂದರು.
ವರದಿ : ಲೋಕೇಶ್ ಸುಣಗಾರ್ ಪಬ್ಲಿಕ್ ನೆಕ್ಸ್ಟ್ ಹಾನಗಲ್
PublicNext
31/03/2026 05:05 pm