ಚಳ್ಳಕೆರೆ: ತಾಲ್ಲೂಕಿನ ಸಾಣಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಟ್ಟೆಜ್ಜನ ಕಪಿಲೆ ಗ್ರಾಮದಲ್ಲಿ ದುಷ್ಕರ್ಮಿಗಳು ಅಮಾನವೀಯ ಕೃತ್ಯ ಎಸಗಿದ್ದಾರೆ. ರೈತ ಕಷ್ಟಪಟ್ಟು ಬೆಳೆದಿದ್ದ ಸೌತೆ ಬೆಳೆಗೆ ರಾತ್ರೋರಾತ್ರಿ ಕಳೆನಾಶಕ ಸಿಂಪಡಿಸುವ ಮೂಲಕ ಫಸಲನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾರೆ.
ಗ್ರಾಮದ ರೈತ ನಾಗರಾಜ್ ಎಂಬುವವರು ತಮ್ಮ 1 ಎಕರೆ 7 ಗುಂಟೆ ಜಮೀನಿನಲ್ಲಿ ಸುಮಾರು 50 ಸಾವಿರ ರೂಪಾಯಿ ಬಂಡವಾಳ ಹೂಡಿ 'ಬಳ್ಳಾರಿ ಸೌತೆ' ಬೆಳೆದಿದ್ದರು. ಬಿತ್ತನೆ ಬೀಜ, ಗೊಬ್ಬರ ಹಾಗೂ ಕೂಲಿ ಆಳುಗಳಿಗಾಗಿ ಸಾಕಷ್ಟು ಹಣ ವ್ಯಯಿಸಿ ಹಗಲಿರುಳು ಶ್ರಮಿಸಿದ್ದರು. ಪ್ರಸ್ತುತ ಬೆಳೆಯು ಕಟಾವಿಗೆ ಸಿದ್ಧವಾಗಿತ್ತು.
ಪ್ರಸ್ತುತ ಮಾರುಕಟ್ಟೆಯಲ್ಲಿ ಸೌತೆಕಾಯಿಗೆ ಪ್ರತಿ ಕೆಜಿಗೆ 30 ರಿಂದ 40 ರೂಪಾಯಿ ದರವಿದೆ. ಈ ಉತ್ತಮ ಬೆಲೆಯಿಂದಾಗಿ ತಮಗೆ ಕನಿಷ್ಠ ಒಂದು ಲಕ್ಷ ರೂಪಾಯಿಗೂ ಅಧಿಕ ಲಾಭ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ, ಕಟಾವಿನ ಹಂತದಲ್ಲಿ ಕಿಡಿಗೇಡಿಗಳು ಬೆಳೆಯ ಮೇಲೆ ವಿಷಕಾರಿ ಕಳೆನಾಶಕ ಸುರಿದ ಪರಿಣಾಮ, ಹಸಿರಿನಿಂದ ಕಂಗೊಳಿಸುತ್ತಿದ್ದ ತೋಟ ಕೆಲವೇ ಗಂಟೆಗಳಲ್ಲಿ ಒಣಗಿ ಹೋಗಿದೆ.
"ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ, ಲಕ್ಷಾಂತರ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ಬೇಸಿಗೆಯಲ್ಲೇ ಬರಸಿಡಿಲು ಬಡಿದಂತಾಗಿದೆ!"
ಕಣ್ಣೆದುರೇ ಬೆಳೆ ನಾಶವಾಗಿರುವುದನ್ನು ಕಂಡು ರೈತ ನಾಗರಾಜ್ ಕಂಗಾಲಾಗಿದ್ದಾರೆ. ಈ ಹೀನ ಕೃತ್ಯವೆಸಗಿದ ಕಿಡಿಗೇಡಿಗಳನ್ನು ತಕ್ಷಣವೇ ಪತ್ತೆ ಹಚ್ಚಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ತಮಗೆ ಆದ ನಷ್ಟಕ್ಕೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಸಂತ್ರಸ್ತ ರೈತರು ಮತ್ತು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
PublicNext
02/04/2026 10:14 am