ಮೊಳಕಾಲ್ಮುರು:-ತಾಲೂಕಿನ ರಾಂಪುರ ಶ್ರೀ ಪೇಟೆ ಬಸವೇಶ್ವರ ಸ್ವಾಮಿ ರಥೋತ್ಸವವನ್ನು ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರತಿ ವರ್ಷವೂ ಹೋಳಿ ಹುಣ್ಣಿಯಂದು ರಥೋತ್ಸವ ನಡೆಸಲಾಗುತ್ತದೆ. ಜಾತ್ರೆಯಲ್ಲಿ ಸುತ್ತೂರಿನ ಅನೇಕ ಗ್ರಾಮಗಳ ಭಕ್ತರು ಜಾತ್ಯಾತೀತವಾಗಿ ಪಾಲ್ಗೊಂಡು ಹರಕೆ ಸಲ್ಲಿಸುವುದು ಇಲ್ಲಿನ ಪದ್ಧತಿಯಾಗಿದೆ.
ರಥವನ್ನು ವಿಶೇಷವಾದ ನಾನಾ ಬಣ್ಣಗಳ ಬಾವುಟಗಳಿಂದ ಹಾಗೂ ದೊಡ್ಡ ಗಾತ್ರದ ಹೂವಿನ ಹಾರಗಳಿಂದ ಅಲಂಕರಿಸಿ ಆಕರ್ಷಕವಾಗಿ ಕಾಣುವಂತೆ ಮಾಡಲಾಗಿತ್ತು. ನಂದಿಕೋಲು, ಡೊಳ್ಳು ಕುಣಿತಗಳು ಗಮನ ಸೆಳೆಯುವಂತಿದ್ದವು.
ಗ್ರಾಮದ ಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಿಂದ ಆರಂಭವಾದ ರಥೋತ್ಸವವು ತೇರು ಬೀದಿಯ ಮೂಲಕ ಸಾಗಿ ಸಣ್ಣ ಬಸವೇಶ್ವರ ದೇವಸ್ಥಾನದವರೆಗೂ ರಥವನ್ನು ಎಳೆದು ವಾಪಾಸು ತರಲಾಯಿತು. ರಥಕ್ಕೆ ಬೃಹತ್ ಗಾತ್ರದ ಹೂವಿನ ಹಾರಗಳನ್ನು ಭಕ್ತರು ಸ್ಪರ್ಧೆಗೆ ಬಿದ್ದಂತೆ ಹಾಕುತ್ತಾರೆ. ಈ ಬೃಹತ್ ಗಾತ್ರದ ಹಾರಗಳನ್ನು ಮೆರವಣಿಗೆ ಮೂಲಕ ಭಕ್ತರು ರಥದವರೆಗೂ ತರುತ್ತಿದ್ದದ್ದು ಗಮನ ಸೆಳೆಯಿತು.
ಬಿಸಿಲಿನ ತಾಪ ಹೆಚ್ಚಿದ್ದ ಕಾರಣ ಜಾತ್ರೆಯಲ್ಲಿ ಭಕ್ತರಿಗೆ ಉಚಿತವಾಗಿ ನೀರು, ಮಜ್ಜಿಗೆ, ಜ್ಯೂಸ್ ವಿತರಣೆ ಮಾಡಲಾಯಿತು. ಶಾಸಕ ಎನ್.ವೈ.ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು
Kshetra Samachara
02/04/2026 06:50 pm
LOADING...