ಚಿಕ್ಕಮಗಳೂರು: ನಗರಸಭೆಯ 2026-27ನೇ ಸಾಲಿನ ಆಯವ್ಯಯ ಮಂಡನೆ ಮತ್ತು ಸಾಮಾನ್ಯ ಸಭೆಯು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತು ಅಭಿವೃದ್ಧಿ ಚರ್ಚೆಗಿಂತ ಸದಸ್ಯರ ನಡುವಿನ ವಾಕ್ಸಮರವೇ ಮೇಲುಗೈ ಸಾಧಿಸಿತು. ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಬಜೆಟ್ ಮಂಡಿಸಿದ ಬೆನ್ನಲ್ಲೇ ಆರಂಭವಾದ ಸಾಮಾನ್ಯ ಸಭೆಯು ತೀವ್ರ ಗೊಂದಲ ಮತ್ತು ಗದ್ದಲಕ್ಕೆ ಸಾಕ್ಷಿಯಾಯಿತು. ನಗರದ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿರುವ ಬಗ್ಗೆ ಮತ್ತು ಇಂಜಿನಿಯರ್‌ಗಳ ಕರ್ತವ್ಯ ಲೋಪದ ಕುರಿತು ಸ್ವಪಕ್ಷೀಯರೇ (ಬಿಜೆಪಿ ಸದಸ್ಯರು) ಅಧ್ಯಕ್ಷರ ವಿರುದ್ಧ ಅಸಮಾಧಾನ ಹೊರಹಾಕಿದ್ದು ಸಭೆಯ ಕಾವು ಏರುವಂತೆ ಮಾಡಿತು. ಈ ಬೆಳವಣಿಗೆಯನ್ನು ಕಂಡು ವ್ಯಂಗ್ಯವಾಡಿದ ಕಾಂಗ್ರೆಸ್ ಸದಸ್ಯ ಲಕ್ಷ್ಮಣ್, ನಿಮ್ಮದೇ ಮೈತ್ರಿ ಪಕ್ಷದ ಅಧ್ಯಕ್ಷರನ್ನು ಪ್ರಶ್ನಿಸುವ ಮೂಲಕ ನೀವು ಆಡಳಿತ ಪಕ್ಷವೋ ಅಥವಾ ವಿರೋಧ ಪಕ್ಷವೋ ಎಂದು ಕಿಚಾಯಿಸಿದ್ದು ಸಭೆಯಲ್ಲಿ ಕಿಡಿ ಹೊತ್ತಿಸಿತು. ಇದು ವೈಯಕ್ತಿಕ ವಾಕ್ಸಮರಕ್ಕೂ ದಾರಿ ಮಾಡಿಕೊಟ್ಟಿತು. ಬಿಜೆಪಿ ಸದಸ್ಯ ರಾಜಶೇಖರ್ ಅವರು ಕಾಂಗ್ರೆಸ್ ನಾಯಕರಿಗೆ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಹಾಕುವ ತಾಕತ್ತಿಲ್ಲ ಎಂದು ಸವಾಲು ಹಾಕಿದರೆ, ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯ ಮುನೀರ್ ಕಳೆದ ಚುನಾವಣೆಯ ಫಲಿತಾಂಶ ನೆನಪಿಸಿ ತಿರುಗೇಟು ನೀಡಿದರು. ಸದಸ್ಯರ ನಡುವಿನ ಈ ಜಿದ್ದಾಜಿದ್ದಿ ಎಷ್ಟು ಜೋರಾಗಿತ್ತೆಂದರೆ, ಇಡೀ ಸಭಾಂಗಣ ಅರಚಾಟ ಮತ್ತು ಕಿರುಚಾಟದಿಂದ ತುಂಬಿಹೋಯಿತು. ಮೈಕ್ ಹಿಡಿದು ಸದಸ್ಯರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದ ಸದ್ದು ತಡೆಯಲಾರದೆ, ಅಲ್ಲಿದ್ದ ಕೆಲವು ನಗರಸಭೆ ಸಿಬ್ಬಂದಿಗಳು ಮತ್ತು ಸದಸ್ಯರೇ ಕಿವಿಯ ಮೇಲೆ ಕೈ ಇಟ್ಟು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು. ಒಟ್ಟಾರೆಯಾಗಿ, ನಗರದ ಬಜೆಟ್ ಬಗ್ಗೆ ಗಂಭೀರ ಚರ್ಚೆಯಾಗಬೇಕಿದ್ದ ಸಭೆಯು ಸದಸ್ಯರ ರಾಜಕೀಯ ಮೇಲಾಟದಿಂದಾಗಿ ಗದ್ದಲದ ಗೂಡಾಗಿ ಮಾರ್ಪಟ್ಟಿತು.
Kshetra Samachara
02/04/2026 04:15 pm