ಚಿಕ್ಕಮಗಳೂರು: ಕಾಡಾನೆ ಹಾವಳಿಯಿಂದ ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ದೊರಕಿಸಿಕೊಡಲು ಖರ್ಚಿಗೆ ಹಣ ನೀಡುವಂತೆ ರೈತರಿಂದ ಲಂಚ ಕೇಳಿ ವಿವಾದಕ್ಕೀಡಾಗಿದ್ದ ಆಲ್ದೂರು ಅರಣ್ಯ ವ್ಯಾಪ್ತಿಯ ಕಣತಿ ವಿಭಾಗದಲ್ಲಿ ಡಿ.ಆರ್.ಎಫ್.ಓ. ವೀರಭದ್ರ ನಾಯಕ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಕಾಡಾನೆ ದಾಳಿಯಿಂದಾಗಿ ತಮ್ಮ 65 ತೆಂಗಿನ ಮರಗಳನ್ನು ಕಳೆದುಕೊಂಡಿದ್ದ ರೈತರೊಬ್ಬರು ಪರಿಹಾರಕ್ಕಾಗಿ ಅಧಿಕಾರಿಯನ್ನು ಸಂಪರ್ಕಿಸಿದಾಗ, ಹೆಚ್ಚಿನ ಪರಿಹಾರ ದೊರಕಿಸಿಕೊಡಲು ಖರ್ಚಿಗೆ ಹಣ ನೀಡುವಂತೆ ವೀರಭದ್ರ ನಾಯಕ್ ನೇರವಾಗಿಯೇ ಬೇಡಿಕೆಯಿಟ್ಟಿದ್ದರು.
ಲಂಚ ನೀಡಲು ನಿರಾಕರಿಸಿದ ರೈತರು ಈ ಸಂಭಾಷಣೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು.
ಈ ವಿಡಿಯೋ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತ ಇಲಾಖೆಯು ಅಧಿಕಾರಿಯನ್ನು ಮೂಡಿಗೆರೆಯ ಶ್ರೀಗಂಧದ ಘಟಕಕ್ಕೆ ಎತ್ತಂಗಡಿ ಮಾಡಿದೆ.
ಗಮನಿಸ ಬೇಕಾದ ಸಂಗತಿಯೆಂದರೆ, ಈ ವರ್ಗಾವಣೆ ಪತ್ರದಲ್ಲಿ ಲಂಚದ ಆರೋಪದ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಕೇವಲ ಆಡಳಿತಾತ್ಮಕ ಹಿತದೃಷ್ಟಿಯಿಂದ ಮುಂದಿನ ನಾಲ್ಕು ತಿಂಗಳು ಅಥವಾ ಮುಂದಿನ ಆದೇಶದವರೆಗೆ ಈ ವರ್ಗಾವಣೆ ಜಾರಿಯಲ್ಲಿರುತ್ತದೆ ಎಂದು ನಮೂದಿಸಲಾಗಿದೆ. ಒಬ್ಬ ಭ್ರಷ್ಟ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲಿಗೆ ಕೇವಲ ವರ್ಗಾವಣೆ ಮಾಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
PublicNext
05/04/2026 01:16 pm
LOADING...