ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ನಿಯಮ ಉಲ್ಲಂಘನೆ: ಕಾಫಿ ತೋಟಕ್ಕಾಗಿ ನೈಸರ್ಗಿಕ ಝರಿ ಅತಿಕ್ರಮಣ?

ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಅರಣ್ಯ ನಿಯಮಗಳನ್ನು ಗಾಳಿಗೆ ತೂರಿ ಕಾಫಿ ತೋಟಕ್ಕೆ ನೀರು ಹರಿಸುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ವಿರೂಪಾಕ್ಷಖಾನ್ ಸಮೀಪವಿರುವ ಸಂರಕ್ಷಿತ ಪ್ರದೇಶದಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರಿಗೆ ಸೇರಿದ ಕಾಫಿ ತೋಟದ ಸಿಬ್ಬಂದಿಗಳು ನಿರ್ಬಂಧಿತ ಜಾಗದಲ್ಲಿ ಅಕ್ರಮವಾಗಿ ಓಡಾಟ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅರಣ್ಯದೊಳಗಿನ ನೈಸರ್ಗಿಕ ಝರಿಗೆ ಮೋಟಾರ್ ಅಳವಡಿಸಿ, ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ಪೈಪ್‌ಲೈನ್ ಅಳವಡಿಸುವ ಮೂಲಕ ಕಾಫಿ ತೋಟಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಈ ಪೈಪ್‌ಲೈನ್ ಕಾರ್ಯಕ್ಕಾಗಿ ಅರಣ್ಯದ ಅಮೂಲ್ಯ ಮರಗಳನ್ನು ಕಡಿದು ಪರಿಸರಕ್ಕೆ ಹಾನಿ ಮಾಡಲಾಗಿದ್ದು, ಸಿಮೆಂಟ್ ಬಳಸಿ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಅರಣ್ಯ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ​

ನಿಷೇಧಿತ ಪ್ರದೇಶದಲ್ಲಿ ಹತ್ತಾರು ಕಾರ್ಮಿಕರನ್ನು ಬಳಸಿ ಕೆಲಸ ಮಾಡಿಸುತ್ತಿರುವುದು ಮತ್ತು ಪಿಕಪ್ ವಾಹನಗಳ ಮೂಲಕ ಸಂರಕ್ಷಿತ ವಲಯದಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದ್ದರೂ, ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಜೋನ್‌ನಲ್ಲಿ ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಮೌನವಾಗಿರುವ ಅಧಿಕಾರಿಗಳ ವಿರುದ್ಧ ಸ್ಥಳೀಯರು ಮತ್ತು ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಈ ಅಕ್ರಮ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಅರಣ್ಯ ಸಂಪತ್ತು ಲೂಟಿ ಮಾಡುತ್ತಿರುವ ತಪ್ಪಿತಸ್ಥರ ವಿರುದ್ಧ ಸಮಗ್ರ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

05/04/2026 12:30 pm

Cinque Terre

1.02 K

Cinque Terre

0

ಸಂಬಂಧಿತ ಸುದ್ದಿ